“ಜಗನ್ನಾಥ ಮೋದಿಯ ಭಕ್ತ” ಎಂಬ ಹೇಳಿಕೆಗೆ ಪ್ರಾಯಶ್ಚಿತ್ತವಾಗಿ ಮೂರು ದಿನ ಉಪವಾಸ: ಸಂಬಿತ್ ಪಾತ್ರ
ಭುವನೇಶ್ವರ: ಜಗನ್ನಾಥನ ಬಗ್ಗೆ ನೀಡಿದ್ದ ತಮ್ಮ ಹೇಳಿಕೆಯು ತೀವ್ರ ರಾಜಕೀಯ ವಿವಾದದ ಸ್ವರೂಪ ಪಡೆದುಕೊಂಡಿರುವುದರಿಂದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಹಾಗೂ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ ಸೋಮವಾರದಿಂದ ಉಪವಾಸ ಕೈಗೊಂಡಿದ್ದಾರೆ.
ಪುರಿಯ ಬಾಬಾ ದಂಡದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಕುರಿತ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದ ಸಂಬಿತ್ ಪಾತ್ರ, ಈ ಕಾರ್ಯಕ್ರಮದ ಯಶಸ್ಸು ಹಾಗೂ ಜನಜಂಗುಳಿಯ ಉತ್ಸಾಹವನ್ನು ಬಣ್ಣಿಸಲು ಪದಗಳಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದರು.
“ಇದೇ ವೇಳೆ, ಜಗನ್ನಾಥರು ಮೋದಿಯ ಭಕ್ತರಾಗಿರುವುದರಿಂದ ರೋಡ್ ಶೋ ಭಾರಿ ಯಶಸ್ಸು ಕಂಡಿದೆ” ಎಂದೂ ಅವರು ಬಣ್ಣಿಸಿದ್ದರು.
ಈ ಹೇಳಿಕೆ ಬಾಯ್ತಪ್ಪಿ ಬಂದಿತೆಂದು ಅವರು ನಂತರ ಸ್ಪಷ್ಟೀಕರಣ ನೀಡಿದ್ದಾರಾದರೂ, ಈ ಹೇಳಿಕೆ ವಿರೋಧ ಪಕ್ಷಗಳ ಪಾಲಿಗೆ ಬಿಜೆಪಿಯ ವಿರುದ್ಧ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸಿದೆ. ವಿಶೇಷವಾಗಿ, ಕೇಸರಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಡಳಿತಾರೂಢ ಬಿಜೆಡಿ ಪಕ್ಷವು, ಬಿಜೆಪಿಯು ಒಡಿಯಾಗಳ ಅಸ್ಮಿತೆಯನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಬಿಜೆಪಿಯ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ತಮ್ಮನ್ನು ತಾವು ದೇವರಿಗಿಂತ ಮಿಗಿಲು ಎಂದು ಭಾವಿಸತೊಡಗಿದ್ದಾರೆ. ಇದು ದುರಹಂಕಾರದ ಪರಮಾವಧಿ. ದೇವರನ್ನು ಮೋದಿಯ ಭಕ್ತನೆನ್ನುವುದು ದೇವರಿಗೆ ಮಾಡುವ ಅವಮಾನ” ಎಂದು ಹರಿಹಾಯ್ದಿದ್ದಾರೆ.
ನಾನು ನನ್ನ ಪ್ರಮಾದದಿಂದ ತೀವ್ರ ತಲ್ಲಣಗೊಂಡಿದ್ದು, ಮಹಾಪ್ರಭು ಜಗನ್ನಾಥನ ಪಾದಕ್ಕೆ ತಲೆ ಬಾಗುತ್ತೇನೆ ಹಾಗೂ ದೇವರಿಂದ ಕ್ಷಮಾಪಣೆಯನ್ನು ಯಾಚಿಸುತ್ತೇನೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.
“ನನ್ನ ಪಾಪಕ್ಕೆ ಪ್ರಾಯಶ್ಚಿಂತ್ತವಾಗಿ ಮುಂದಿನ ಮೂರು ದಿನಗಳ ಕಾಲ ನಾನು ಉಪವಾಸ ಕೈಗೊಳ್ಳಲಿದ್ದೇನೆ” ಎಂದು ಕಳೆದ ರಾತ್ರಿ ಬಿಡುಗಡೆ ಮಾಡಿರುವ ತಮ್ಮ ವಿಡಿಯೊ ಸಂದೇಶದಲ್ಲಿ ಅವರು ಹೇಳಿಕೊಂಡಿದ್ದಾರೆ.