ಸಂದೇಶ್ಖಾಲಿ ಹಿಂಸಾಚಾರ ಪ್ರಕರಣ ; ಪ್ರಮುಖ ಆರೋಪಿ ಟಿಎಂಸಿ ನಾಯಕ ಶಿಬು ಹಾಝ್ರಾ ಬಂಧನ
ಕೋಲ್ಕತಾ : ಸಂದೇಶ್ಖಾಲಿ ಹಿಂಸಾಚಾರ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ, ಟಿಎಂಸಿ ನಾಯಕ ಶಿಬು ಪ್ರಸಾದ್ ಹಾಝ್ರಾ ಅವರನ್ನು ಬಸಿರ್ಹಾಟ್ ನಗರದ ನಝತ್ ಪ್ರದೇಶದಲ್ಲಿ ಬಂಧಿಸಲಾಗಿದೆ.
ಹಾಝ್ರಾನನ್ನು ರವಿವಾರ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಅತನಿಗೆ ಎಂಟು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂದೇಶ್ಖಾಲಿ ಹಿಂಸಾಚಾರದಲ್ಲಿ ಶಾಮೀಲಾದ ಆರೋಪದ ಜೊತೆಗೆ ಟಿಎಂಸಿ ನಾಯಕರಾದ ಶಿಬು ಪ್ರಸಾದ್ ಹಾಝ್ರಾ ಹಾಗೂ ಉತ್ತಮ್ ಸರ್ದಾರ್ ವಿರುದ್ಧ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಯತ್ನದ ಆರೋಪಗಳನ್ನು ಎಫ್ ಐ ಆರ್ ನಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಸಂತ್ರಸ್ತೆಯೊಬ್ಬರು ಮ್ಯಾಜಿಸ್ಟ್ರೇಟ್ ಅವರ ಮುಂದೆ ನೀಡಿದ ಹೇಳಿಕೆಯ ಆಧಾರದಲ್ಲಿ ಇವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 164ರಡಿ ಈ ಎರಡು ಹೊಸ ಆರೋಪಗಳನ್ನು ಹೊರಿಸಲಾಗಿದೆ ಎಂದು ಪಶ್ಚಿಮಬಂಗಾಳದ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಭೂಗಳ್ಳತನದ ಪ್ರಕರಣವೊಂದರಲ್ಲಿಯೂ ಪ್ರಮುಖ ಆರೋಪಿಯಾಗಿರುವ ಶಿಬು ಹಾಝ್ರಾನ ವಿರುದ್ಧ ಸಂದೇಶ್ಖಾಲಿಯ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿದ ಬಳಿಕ ಆತ ತಲೆಮರೆಸಿಕೊಂಡಿದ್ದನು.
ಸಂದೇಶ್ಖಾಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಶಿಬು ಹಾಝ್ರಾ, ಉತ್ತಮ್ ಸರ್ದಾರ್ ಸೇರಿದಂತೆ ಈವರೆಗೆ ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ ಎಂದು ಬಸಿರ್ಹಾಟ್ನ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.ಸಂದೇಶ್ಖಾಲಿ ಹಿಂಸಾಚಾರಕ್ಕೆ ಸಂಬಂಧಿಸಿ ಉತ್ತಮ್ ಸರ್ದಾರ್ನನ್ನು ಫೆ.10ರಂದು ಬಂಧಿಸಿದ್ದರು.
ಈ ಮಧ್ಯೆ ಸಂದೇಶ್ಖಾಲಿ ನಗರದ ದೌಡ್ಪುರ, ಗೋಪಾಲ್ಪುರ ಘಾಟ್, ಅಟಾಪುರ್ ಹಾಗೂ ಪುಲೆಪಾರಾ ಪ್ರದೇಶಗಳಲ್ಲಿ ಸೆಕ್ಷನ್ 144 ನಿಷೇಧಾಜ್ಞೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ ಉಳಿದ 15 ಪ್ರದೇಶಗಳಲ್ಲಿ ಫೆಬ್ರವರಿ 21ರ ಮಧ್ಟಾಹ್ನದವರೆಗೆ ನಿಷೇಧ ಮುಂದುವರಿಯಲಿದೆಯೆಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಉತ್ತರಪರಗಣ ಜಿಲ್ಲೆಯ ಸಂದೇಶ್ಖಾಲಿಯಲ್ಲಿ ಜ.5ರಂದು ಟಿಎಂಸಿ ನಾಯಕ ಶೇಖ್ ಶಾಜಹಾನ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಜಾರಿ ನಿರ್ದೇಶಾಲಯ (ಈಡಿ)ದ ಅಧಿಕಾರಿಗಳ ತಂಡದ ಮೇಲೆ ಗುಂಪೊಂದು ದಾಳಿ ನಡೆಸಿದ ಆನಂತರ ಆ ಪ್ರದೇಶದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು.