ನಕಲಿ ಎಸ್‌ಬಿಐ ಬ್ಯಾಂಕ್‌ ಶಾಖೆ ತೆರದು ಸಿನಿಮೀಯ ಶೈಲಿಯಲ್ಲಿ ಜನರಿಗೆ ಲಕ್ಷಾಂತರ ರೂ. ವಂಚನೆ

Update: 2024-10-03 11:34 GMT

ಸಾಂದರ್ಭಿಕ ಚಿತ್ರ | PC : PTI 

ರಾಯಪುರ: ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್ ವಹಿವಾಟುಗಳಲ್ಲಿ ನಕಲಿ ದಾಖಲೆಗಳ ಮೂಲಕ ವಂಚನೆಗಳು ಮತ್ತು ಇತರ ಹಣಕಾಸು ಹಗರಣಗಳ ವಿವಿಧ ಪ್ರಕರಣಗಳು ವರದಿಯಾಗಿವೆ. ಆದರೆ ಛತ್ತೀಸ್‌ಗಡದಲ್ಲಿನ ಇತ್ತೀಚಿನ ಘಟನೆಯು ಈವರೆಗೆ ದಾಖಲಾಗಿರುವ ಅತ್ಯಂತ ಧೈರ್ಯಶಾಲಿ ವಂಚಕ ಯೋಜನೆಯಾಗಿದೆ. ಅಪರಾಧಿಗಳು ನೇರವಾಗಿ ಚಲನಚಿತ್ರವೊಂದರಿಂದ ಎತ್ತಿಕೊಂಡಂತೆ ಬೃಹತ್ ಬ್ಯಾಂಕಿಂಗ್ ವಂಚನೆಯನ್ನು ಅತ್ಯಂತ ನಿಖರವಾಗಿ ಯೋಜಿಸಿ ನಕಲಿ ಎಸ್‌ಬಿಐ ಶಾಖೆಯನ್ನು ತೆರೆದಿದ್ದರು. ಅಕ್ರಮ ನೇಮಕಾತಿಗಳು,ನಕಲಿ ತರಬೇತಿ ಮತ್ತು ನಿರುದ್ಯೋಗಿಗಳು ಮತ್ತು ಸ್ಥಳೀಯ ಗ್ರಾಮಸ್ಥರನ್ನು ವಂಚಿಸಲು ಹೆಣೆಯಲಾಗಿದ್ದ ವಿಸ್ತಾರವಾದ ಸಂಚುಗಳನ್ನು ಈ ಹಗರಣವು ಒಳಗೊಂಡಿದೆ.

ರಾಜ್ಯ ರಾಜಧಾನಿ ರಾಯಪುರದಿಂದ ಸುಮಾರು 250 ಕಿ.ಮೀ.ದೂರದ ಸಕ್ತಿ ಜಿಲ್ಲೆಯ ಛಾಪೋರಾ ಗ್ರಾಮದಲ್ಲಿ ನಕಲಿ ಎಸ್‌ಬಿಐ ಖಾತೆಯನ್ನು ತೆರೆದಿದ್ದ ವಂಚಕರು ಆರು ಅಮಾಯಕರನ್ನು ಸಿಬ್ಬಂದಿಗಳನ್ನಾಗಿ ನೇಮಕ ಮಾಡಿಕೊಂಡಿದ್ದರು. ತಮ್ಮದು ನಿಜವಾದ ಹುದ್ದೆ ಎಂದೇ ಭಾವಿಸಿದ್ದ ಈ ಸಿಬ್ಬಂದಿಗಳು ತಮ್ಮ ಬದುಕು ದಡಹತ್ತಿತು ಎಂದು ಭಾವಿಸಿದ್ದರು. ಇವರಿಗೆಲ್ಲ ಮಾಸಿಕ 30,000-35,000 ರೂ.ವೇತನವನ್ನು ನಿಗದಿಗೊಳಿಸಲಾಗಿತ್ತು.

10 ದಿನಗಳ ಹಿಂದಷ್ಟೇ ಆರಂಭಗೊಂಡಿದ್ದ ಎಸ್‌ಬಿಐ ಶಾಖೆ ಹೊಸ ಪೀಠೋಪಕರಣಗಳು,ವೃತ್ತಿಪರ ದಾಖಲೆಗಳು ಮತ್ತು ಬ್ಯಾಂಕ್ ಕೌಂಟರ್‌ಗಳಂತಹ ನೈಜ ಬ್ಯಾಂಕಿನ ಎಲ್ಲ ಅಂಶಗಳನ್ನೂ ಹೊಂದಿತ್ತು.

ಇದೊಂದು ನಕಲಿ ಶಾಖೆ ಎನ್ನುವುದು ಗೊತ್ತಿಲ್ಲದ ಗ್ರಾಮಸ್ಥರು ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದು ವಹಿವಾಟುಗಳನ್ನೂ ಆರಂಭಿಸಿದ್ದರು.

ಸಮೀಪದ ಡಬ್ರಾ ಎಸ್‌ಬಿಐ ಶಾಖೆಯ ಪ್ರಬಂಧಕರು ಸಂಶಯ ವ್ಯಕ್ತಪಡಿಸಿದ ಬಳಿಕ ಹಿರಿಯ ಪೋಲಿಸ್ ಮತ್ತು ಎಸ್‌ಬಿಐ ಅಧಿಕಾರಿಗಳು ವಿಚಾರಣೆಗಾಗಿ ಛಾಪೋರಾ ಶಾಖೆಗೆ ಆಗಮಿಸುವವರೆಗೂ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಶಾಖೆ ನಕಲಿಯಾಗಿದೆ ಮತ್ತು ನೇಮಕಾತಿಗಳೂ ನಕಲಿಯಾಗಿವೆ ಎನ್ನುವುದು ತನಿಖೆಯಿಂದ ಬಯಲಾಗಿತ್ತು.

ರೇಖಾ ಸಾಹು,ಮಂದಿರ ದಾಸ್ ಮತ್ತು ನಕಲಿ ಶಾಖೆಯ ಮ್ಯಾನೇಜರ್ ಪಂಕಜ್ ಸೇರಿದಂತೆ ಈ ವಂಚನೆಯಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಈವರೆಗೆ ಗುರುತಿಸಿರುವುದಾಗಿ ಪೋಲಿಸ್ ಅಧಿಕಾರಿ ರಾಜೇಶ ಪಟೇಲ್ ತಿಳಿಸಿದರು.

ವಂಚಕರು ಸಿಬ್ಬಂದಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿದ್ದು, ಅವರಿಗೆ ಬ್ಯಾಂಕಿಂಗ್ ತರಬೇತಿಯನ್ನೂ ಒದಗಿಸಿದ್ದರು. ಈ ಹುದ್ದೆಗಳಿಗಾಗಿ ಅವರಿಂದ ಎರಡು ಲಕ್ಷ ರೂ.ಗಳಿಂದ ಆರು ಲಕ್ಷ ರೂ.ವರೆಗೆ ಹಣವನ್ನು ವಸೂಲು ಮಾಡಲಾಗಿತ್ತು.

ಸ್ಥಳೀಯ ಗ್ರಾಮಸ್ಥ ಅಜಯ್ ಕುಮಾರ್ ಅಗರವಾಲ್ ಎನ್ನುವವರು ಛಾಪೋರಾ ದಲ್ಲಿ ಎಸ್‌ಬಿಐ ಕಿಯೋಸ್ಕ್‌ಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಯಾವುದೇ ಪೂರ್ವ ಸೂಚನೆಯಿಲ್ಲದೆ ರಾತ್ರಿ ಬೆಳಗಾಗುವಷ್ಟರಲ್ಲಿ ಎಸ್‌ಬಿಐ ಖಾತೆ ಆರಂಭಗೊಂಡಾಗ ಅವರಿಗೆ ಶಂಕೆಯುಂಟಾಗಿತ್ತು. ಅವರು ಶಾಖೆಗೆ ತೆರಳಿ ವಿಚಾರಿಸಿದಾಗಿ ತೃಪ್ತಿಕರ ಉತ್ತರಗಳನ್ನು ನೀಡಲು ಸಿಬ್ಬಂದಿಗಳು ವಿಫಲಗೊಂಡಿದ್ದರು,ನಾಮಫಲಕದ ಮೇಲೆ ಶಾಖೆಯ ಕೋಡ್ ಸಹ ಇರಲಿಲ್ಲ. ಅವರು ತಕ್ಷಣ ಡಬ್ರಾ ಎಸ್‌ಬಿಐ ಶಾಖಾ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದು,ತನ್ಮೂಲಕ ಬೃಹತ್ ವಂಚನೆ ಬಯಲಾಗಿದೆ.

ಗ್ರಾಮದ ನಿವಾಸಿ ತೋಶ ಚಂದ್ರ ಎಂಬವರ ಕಟ್ಟಡದಲ್ಲಿ ಬ್ಯಾಂಕ್ ಶಾಖೆ ಆರಂಭವಾಗಿತ್ತು ಮತ್ತು ಮಾಸಿಕ 7,000 ರೂ.ಗಳ ಬಾಡಿಗೆ ನಿಗದಿಯಾಗಿತ್ತು.

ಕೊರ್ಬಾ, ಬಾಲೋಡ್, ಕಬೀರಧಾಮ ಮತ್ತು ಸಕ್ತಿ ಸೇರಿದಂತೆ ವಿವಿಧ ಜಿಲ್ಲೆಗಳ ನಿರುದ್ಯೋಗಿಗಳು ವಂಚಕರ ಪ್ರಾಥಮಿಕ ಗುರಿಗಳಾಗಿದ್ದರು.

ಹೊಸ ಬ್ಯಾಂಕ್ ಶಾಖೆಯ ಬಗ್ಗೆ ಉತ್ಸುಕರಾಗಿದ್ದ ಹಲವು ಗ್ರಾಮಸ್ಥರು ಬ್ಯಾಂಕ್ ಸಂಪುರ್ಣವಾಗಿ ಕಾರ್ಯಾರಂಭಗೊಂಡ ನಂತರ ಸಾಲಗಳನ್ನು ಪಡೆಯಲು ಯೋಜಿಸಿದ್ದರು. ನಕಲಿ ಶಾಖೆಯು ಮುಂದುವರಿದಿದ್ದರೆ ಬಹಳಷ್ಟು ಜನರು ಠೇವಣಿಗಳನ್ನು ಇರಿಸುತ್ತಿದ್ದರು ಮತ್ತು ಕೋಟ್ಯಂತರ ರೂ.ಗಳ ವಂಚನೆಯಾಗುತ್ತಿತ್ತು ಎಂದು ಗ್ರಾಮದ ನಿವಾಸಿಯೋರ್ವರು ಹೇಳಿದರು.

ಶಾಖೆಯಲ್ಲಿ ಸಿಬ್ಬಂದಿಗಳಾಗಿ ನೇಮಕಗೊಂಡಿದ್ದ ನಿರುದ್ಯೋಗಿಗಳು ಹಣವನ್ನು ಕಳೆದುಕೊಂಡಿದ್ದು ಮಾತ್ರವಲ್ಲ,ಕಾನೂನು ತೊಂದರೆಗಳನ್ನೂ ಎದುರಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಉದ್ಯೋಗದ ಆಸೆಯಲ್ಲಿ ವಂಚಕರಿಗೆ ಹಣ ನೀಡಲು ಕುಟುಂಬದ ಚಿನ್ನಾಭರಣಗಳನ್ನು ಅಡವಿಟ್ಟಿದ್ದರು.

ಕೃಪೆ: NDTV

Full View

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News