ದಿಲ್ಲಿ ವಾಯು ಮಾಲಿನ್ಯ | ಕೇಂದ್ರ, ಪಂಜಾಬ್, ಹರ್ಯಾಣ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

Update: 2024-10-03 16:12 GMT

ಸುಪ್ರೀಂ ಕೋರ್ಟ್ |  PTI 

ಹೊಸದಿಲ್ಲಿ : ಭತ್ತದ ಕೂಳೆಯನ್ನು ಸುಡುವ ರೈತರಿಂದ ನಾಮಮಾತ್ರ ದಂಡ ಸಂಗ್ರಹಿಸುತ್ತಿರುವುದಕ್ಕಾಗಿ ಪಂಜಾಬ್ ಮತ್ತು ಹರ್ಯಾಣ ಸರಕಾರಗಳನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ. ಇದು ದಿಲ್ಲಿಯ ವಾಯು ಗುಣಮಟ್ಟ ಕುಸಿಯಲು ಕಾರಣವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಅದೇ ವೇಳೆ, ದಿಲ್ಲಿ ಸುತ್ತಮುತ್ತ ಕೂಳೆ ಸುಡುವುದನ್ನು ನಿಯಂತ್ರಿಸಲು ವಿಫಲವಾಗಿರುವುದಕ್ಕಾಗಿ ವಾಯು ಗುಣಮಟ್ಟ ನಿರ್ವಹಣೆ ಆಯೋಗ (ಸಿಎಕ್ಯೂಎಮ್)ವನ್ನೂ ಸುಪ್ರೀಂ ಕೋರ್ಟ್ ಟೀಕಿಸಿತು. ಕೂಳೆ ಸುಡುವುದನ್ನು ನಿಯಂತ್ರಿಸಲು ತಾನು ನೀಡಿರುವ ನಿರ್ದೇಶನವನ್ನು ಪಾಲಿಸಲು ಅಯೋಗವು ಪ್ರಯತ್ನವನ್ನೇ ಮಾಡಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿತು.

ದಿಲ್ಲಿಯ ವಾಯು ಮಾಲಿನ್ಯದ ಬಗ್ಗೆ ಚರ್ಚಿಸಲು ಆಗಸ್ಟ್ 29ರಂದು ಕರೆಯಲಾದ ಆಯೋಗದ ಸಭೆಯಲ್ಲಿ 11 ಸದಸ್ಯರ ಪೈಕಿ ಕೇವಲ ಐವರು ಭಾಗವಹಿಸಿದ್ದರು ಮತ್ತು ಸಭೆಯಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಬಗ್ಗೆ ಚರ್ಚೆಯೂ ನಡೆಯಲಿಲ್ಲ ಎಂದು ನ್ಯಾಯಾಲಯ ಹೇಳಿತು.

ಆಯೋಗವು ಕೂಳೆ ಸುಡುವುದಕ್ಕೆ ಸಂಬಂಧಿಸಿ ದಾಖಲಾದ ಪ್ರಕರಣಗಳ ಪೈಕಿ ಒಂದರಲ್ಲೂ ವಿಚಾರಣೆ ಆರಂಭಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನು ಒಳಗೊಂಡ ವಿಭಾಗಪೀಠ ಹೇಳಿತು.

ಆಯೋಗವು ಸಲ್ಲಿಸಿದ ಪಾಲನಾ ವರದಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿತು.

ಒಂದು ವಾರದಲ್ಲಿ ಅಫಿದಾವಿತ್‌ಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ವಾಯು ಗುಣಮಟ್ಟ ನಿರ್ವಹಣೆ ಆಯೋಗಕ್ಕೆ ಸೂಚನೆ ನೀಡಿತು ಮತ್ತು ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿತು.

ಸೆಪ್ಟಂಬರ್ 15 ಮತ್ತು 30ರ ನಡುವೆ, ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಭತ್ತದ ಕೂಳೆ ಸುಡುವ 129 ಘಟನೆಗಳು ನಡೆದಿವೆ ಎಂದು ಆಯೋಗ ನೀಡಿರುವ ಅಂಕಿಅಂಶಗಳು ತಿಳಿಸಿವೆ. ನಿಯಮ ಉಲ್ಲಂಘಕರಿಂದ ದಂಡ ವಸೂಲಿ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ ನ್ಯಾಯಾಲಯವು, ಈಗ ಮಾಡಬೇಕಾಗಿರುವುದೇನೆಂದರೆ, ಅವರನ್ನು ಕಾನೂನಿನಡಿಯಲ್ಲಿ ಉತ್ತರದಾಯಿಯಾಗಿಸಬೇಕು ಎಂದಿತು.

ಆಯೋಗದ ಕಠಿಣ ಕಾಯ್ದೆಯಡಿ ತಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವ ಅರಿವು ಜನರಿಗೆ ಬರದಿದ್ದರೆ, ಕೂಳೆ ಸುಡುವಿಕೆ ನಿಲ್ಲಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

ಕಾನೂನಿನ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಆಯೋಗವಾಗಲಿ, ಕೂಳೆ ಸುಡುವಿಕೆ ಪ್ರಕರಣಗಳು ಈಗಲೂ ವರದಿಯಾಗುತ್ತಿರುವ ಪಂಜಾಬ್ ಮತ್ತು ಹರ್ಯಾಣಗಳ ರಾಜ್ಯ ಸರಕಾರಗಳಾಗಲಿ ಈ ಸಮಸ್ಯೆಯನ್ನು ನಿವಾರಿಸುವ ಬಗ್ಗೆ ಗಂಭೀರವಾಗಿ ಕೆಲಸ ಮಾಡುತ್ತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿತು.

ಸೆಪ್ಟಂಬರ್ 27ರಂದು ನಡೆದ ಹಿಂದಿನ ವಿಚಾರಣೆಯ ವೇಳೆಯೂ, ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ವಿಫಲವಾಗಿರುವುದಕ್ಕಾಗಿ ವಾಯು ಗುಣಮಟ್ಟ ನಿರ್ವಹಣೆ ಆಯೋಗವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News