ಉಪವಾಸ ಮುಷ್ಕರಕ್ಕಿಂತ ಮುನ್ನವೇ ರೈತ ನಾಯಕ ಡಲ್ಲೇವಾಲ್ ಪೊಲೀಸ್ ವಶಕ್ಕೆ
ಚಂಡಿಗಢ : ಜನಪ್ರಿಯ ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಅವರನ್ನು ಸಂಗೂರು ಜಿಲ್ಲೆಯ ಖನೌರಿ ಗಡಿಯಿಂದ ಮಂಗಳವಾರ ಮುಂಜಾನೆ ಪಂಜಾಬ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಕರೆದೊಯ್ದಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಲ್ಲೇವಾಲ್ ಅವರು ಮಂಗಳವಾರದಿಂದ ಅಮರಣಾಂತ ಉಪವಾಸ ಮುಷ್ಕರ ಆರಂಭಿಸಲಿದ್ದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ ಸಂಘಟನೆ)ದ ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಅವರನ್ನು ಖನೌರಿ ಗಡಿ ಕೇಂದ್ರದಿಂದ ಪೊಲೀಸರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರವಣ್ ಸಿಂಗ್ ಪಂಧೇರ್ ಪ್ರತಿಪಾದಿಸಿದ್ದಾರೆ.
ಮುಂಜಾನೆ 2.30ಕ್ಕೆ ಪೊಲೀಸರು ಡೇರೆ ಪ್ರವೇಶಿಸಿದರು ಹಾಗೂ ಉಪವಾಸ ಮುಷ್ಕರ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದ ಡಲ್ಲೇವಾಲ್ ಅವರನ್ನು ವಶಕ್ಕೆ ತೆಗೆದುಕೊಂಡರು ಎಂದು ಅವರು ಆರೋಪಿಸಿದ್ದಾರೆ.
ಪೊಲೀಸ್ ಕ್ರಮವನ್ನು ಖಂಡಿಸಿರುವ ಪಂಧೇರ್ ಅವರು ಡಲ್ಲೇವಾಲ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಡೇರೆಯನ್ನು ನಾಶ ಮಾಡಲಾಗಿದೆ. ಪಾಟಿಯಾಲ ಪೊಲೀಸರು ವಯೋ ಸಹಜ ಹಾಗೂ ಆರೋಗ್ಯದ ಸಮಸ್ಯೆಗಳ ಕಾರಣಕ್ಕಾಗಿ ಡಲ್ಲೇವಾಲ್ ಅವರನ್ನು ದಯಾನಂದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಕರೆದೊಯ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬೆಳೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ ಆಗ್ರಹಿಸಿ ಮಂಗಳವಾರದಿಂದ ಅಮರಣಾಂತ ಉಪವಾಸ ಮುಷ್ಕರ ಆರಂಭಿಸಲಾಗುವುದು ಎಂದು ಡಲ್ಲೇವಾಲ್ ಅವರು ಶನಿವಾರ ಘೋಷಿಸಿದ್ದರು. ರೈತರ ಬೇಡಿಕೆಯನ್ನು ಈಡೇರಿಸಲು ತಾನು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಕೂಡ ಅವರು ಪ್ರತಿಪಾದಿಸಿದ್ದರು.