ನಮಗೆ ಇವಿಎಂ ಬೇಡ, ಮತ ಪತ್ರ ಬೇಕು : ಖರ್ಗೆ
ಹೊಸದಿಲ್ಲಿ : ಸಾಂಪ್ರದಾಯಿಕ ಮತ ಪತ್ರದ ಮೂಲಕ ಮತದಾನ ನಡೆಸುವುದನ್ನು ಮರು ಜಾರಿಗೆ ತರಬೇಕೆಂಬ ಅಭಿಪ್ರಾಯಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಧ್ವನಿಗೂಡಿಸಿದ್ದಾರೆ.
‘‘ನಮಗೆ ಇವಿಎಂ ಮೂಲಕ ಚುನಾವಣೆ ಬೇಡ. ನಾವು ಮತ ಪತ್ರದ ಮೂಲಕ ಚುನಾವಣೆ ನಡೆಸುವುದನ್ನು ಬಯಸುತ್ತೇವೆ. ನಾವು ಭಾರತ್ ಜೋಡೋ ಯಾತ್ರೆ ನಡೆಸಿದಂತೆಯೇ, ಚುನಾವಣೆಯಲ್ಲಿ ಮತ ಪತ್ರ ಬಳಸುವಂತೆ ಆಗ್ರಹಿಸಿ ರಾಷ್ಟ್ರವ್ಯಾಪಿ ಅಭಿಯಾನ ನಡೆಸಲಿದ್ದೇವೆ’’ ಎಂದು ಅವರು ಹೇಳಿದರು.
ಮತಪತ್ರದಲ್ಲಿ ಚುನಾವಣೆ ನಡೆಯಬೇಕೆಂಬ ಅರಿವನ್ನು ಜನರಲ್ಲಿ ಮೂಡಿಸಲು ನಾವು ಈ ಅಭಿಯಾನವನ್ನು ಆರಂಭಿಸುತ್ತೇವೆ. ನಾವು ಈ ಬಗ್ಗೆ ಇತರ ರಾಜಕೀಯ ಪಕ್ಷಗಳೊಂದಿಗೆ ಕೂಡ ಮಾತುಕತೆ ನಡೆಸಲಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
‘‘ನಾವೆಲ್ಲರೂ ಸಂಘಟಿತರಾಗಿ ಮುಂದುವರಿಯಬೇಕು. ನಾನು ಚುನಾವಣೆ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ, ಎಲ್ಲಾ ಬಡವರ ಹಾಗೂ ದಮನಕ್ಕೆ ಒಳಗಾದವರ ಮತಗಳು ವ್ಯರ್ಥವಾಗುತ್ತಿವೆ ಎಂದು ನಾನು ಖಂಡಿತವಾಗಿ ಹೇಳುತ್ತೇನೆ. ಅವರೆಲ್ಲರೂ ಮತ ಪತ್ರದ ಮೂಲಕ ಮತದಾನ ನಡೆಸುವಂತೆ ಒತ್ತಾಯಿಸಬೇಕು’’ ಎಂದು ಖರ್ಗೆ ಅವರು ದಿಲ್ಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ನಡೆದ ‘ಸಂವಿಧಾನ ರಕ್ಷಕ್ ಅಭಿಯಾನ’ ಕಾರ್ಯಕ್ರಮದಲ್ಲಿ ಹೇಳಿದರು.