ರಾಹುಲ್ ಗಾಂಧಿ ಬ್ರಿಟನ್ ಪೌರತ್ವ ಹೊಂದಿದ್ದಾರೆ : ಅರ್ಜಿದಾರರ ಆರೋಪ
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟನ್ ಪೌರತ್ವ ಹೊಂದಿರುವುದರಿಂದ, ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಬೇಕು ಹಾಗೂ ರಾಹುಲ್ ಗಾಂಧಿಯ ಪೌರತ್ವದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕರ್ನಾಟಕ ನಿವಾಸಿ ಎಸ್. ವಿಘ್ನೇಶ್ ಶಿಶಿರ್ ಸಲ್ಲಿಸಿರುವ ಅರ್ಜಿಯ ಕುರಿತು ಪರಿಶೀಲಿಸಲಾಗುವುದು ಎಂದು ಕೇಂದ್ರ ಸರಕಾರವು ಅಲಹಾಬಾದ್ ಹೈಕೋರ್ಟ್ ಗೆ ತಿಳಿಸಿದೆ.
ಈ ವಿಷಯದ ಕುರಿತು ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆಗಳನ್ನು ಪಡೆದು, ಮೂರು ವಾರಗಳೊಳಗೆ ಮುಂದಿನ ವಿಚಾರಣಾ ದಿನಾಂಕದಂದು ಪ್ರತಿಕ್ರಿಯೆ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿತು.
ಅದಕ್ಕೆ ಪ್ರತಿಯಾಗಿ, “ಸಚಿವಾಲಯವು ಅರ್ಜಿದಾರರ ಮನವಿಯನ್ನು ಸ್ವೀಕರಿಸಿದ್ದು, ಈ ಮನವಿಯ ಪರಿಶೀಲನೆ ಪ್ರಗತಿಯಲ್ಲಿದೆ. ಈ ವಿಷಯವನ್ನು ಡಿಸೆಂಬರ್ 19, 2024ರಂದು ವಿಚಾರಣೆಗೆ ಪಟ್ಟಿ ಮಾಡಿ. ಮುಂದಿನ ವಿಚಾರಣಾ ದಿನಾಂಕದಂದು ಈ ಮನವಿಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು” ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಈ ಕುರಿತು NDTV ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅರ್ಜಿದಾರ ವಿಘ್ನೇಶ್, “ಮುಂದಿನ ವಿಚಾರಣಾ ದಿನಾಂಕವಾದ ಡಿಸೆಂಬರ್ 19ರೊಳಗೆ ಈ ವಿಷಯದ ಕುರಿತು ಸ್ಪಷ್ಟ ಮತ್ತು ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಈ ವಿಷಯದಲ್ಲಿನ ವಾಸ್ತವಾಂಶದ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಕೂಡಾ ನ್ಯಾಯಾಲಯಕ್ಕೆ ಒದಗಿಸಬೇಕಿದೆ” ಎಂದು ಹೇಳಿದ್ದಾರೆ.
“ಕೇಂದ್ರ ಸರಕಾರವು ತಕ್ಷಣವೇ ರಾಹುಲ್ ಗಾಂಧಿಯ ಭಾರತೀಯ ಪೌರತ್ವವನ್ನು ರದ್ದುಗೊಳಿಸುತ್ತದೆ ಎಂದು ನಾನು ನಂಬಿದ್ದೇನೆ. ರಾಹುಲ್ ಗಾಂಧಿ ಅವರ ಹೆಸರು ತಮ್ಮ ಪೌರತ್ವ ದಾಖಲೆಗಳಲ್ಲಿದೆ ಎಂಬ ನೇರ ಮಾಹಿತಿಯನ್ನು ನಾವು ಬ್ರಿಟನ್ ಸರಕಾರದಿಂದ ಸ್ವೀಕರಿಸಿದ್ದೇವೆ” ಎಂದೂ ಅವರು ತಿಳಿಸಿದ್ದಾರೆ.
“ನಾವು ಎಲ್ಲ ದಾಖಲೆಗಳನ್ನೂ ಅಲಹಾಬಾದ್ ಹೈಕೋರ್ಟ್ ಗೆ ಸಲ್ಲಿಸಿದ್ದೇವೆ. ಭಾರತೀಯ ಕಾನೂನುಗಳನ್ವಯ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಒಂದು ವೇಳೆ ಯಾರಾದರೂ ಅನ್ಯ ದೇಶದ ಪೌರತ್ವವನ್ನು ಸ್ವೀಕರಿಸಿದರೆ, ಅಂಥವರ ಭಾರತೀಯ ಪೌರತ್ವವು ಸ್ವಯಂಚಾಲಿತವಾಗಿ ರದ್ದಾಗುತ್ತದೆ” ಎಂದೂ ಅವರು ಹೇಳಿದ್ದಾರೆ.