ಸಂವಿಧಾನದಿಂದ ಭಾರತವು ಸಾಮಾಜಿಕ ನ್ಯಾಯ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧಿಸಿದೆ: ರಾಷ್ಟ್ರಪತಿ ಮುರ್ಮು
ಮುಂಬೈ : ಭಾರತೀಯ ಸಂವಿಧಾನವು ಒಂದು ಸಜೀವ ಹಾಗೂ ಪ್ರಗತಿಪರ ದಾಖಲೆ ಪತ್ರವಾಗಿದ್ದು ಅದರ ಮೂಲಕ ನಾವು ಸಾಮಾಜಿಕ ನ್ಯಾಯ ಹಾಗೂ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಸಾಧಿಸಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ. ಭಾರತೀಯ ಸಂವಿಧಾನವು ಅಂಗೀಕಾರಗೊಂಡ 75ನೇ ವರ್ಷಾಚರಣೆಯ ಅಂಗವಾಗಿ ಸಂಸತ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತೀಯ ಸಂವಿಧಾನವನ್ನು ರೂಪಿಸುವಲ್ಲಿ ಸಂವಿಧಾನ ರಚನಾ ಸಭೆಯ 15 ಮಂದಿ ಮಹಿಳಾ ಸದಸ್ಯರ ಕೊಡುಗೆಯನ್ನು ಸ್ಮರಿಸಿಕೊಂಡ ಅವರು ‘‘ಮಹಿಳಾ ಮೀಸಲಾತಿ ಕುರಿತ ಕಾನೂನು ನಮ್ಮ ಪ್ರಜಾಪ್ರಭುತ್ವದಲ್ಲಿ ಮಹಿಳಾ ಸಬಲೀಕರಣದ ನೂತನ ಶಕೆಯನ್ನೇ ಆರಂಭಿಸಿದೆ’’ ಎಂದು ಹೇಳಿದರು.
ತಮ್ಮ ನಡವಳಿಕೆಯಲ್ಲಿ ಸಾಂವಿಧಾನಿಕ ಆದರ್ಶಗಳನ್ನು ಆಳವಡಿಸಿಕೊಳ್ಳುವಂತೆ ಹಾಗೂ ತಿ, 2047ರೊಳಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಮತ್ತು ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವಂತೆ ರಾಷ್ಟ್ರಪತಿ ಅವರು ದೇಶದ ಜನತೆಗೆ ಕರೆ ನೀಡಿದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಿ, ಸಂವಿಧಾನ ರಚನಾ ಸಭೆಯು ರೂಪಿಸಿರುವ ಮಾದರಿಯಲ್ಲಿ ರಚನಾತ್ಮಕ ಹಾಗೂ ಘನತೆಯುತವಾದ ಚರ್ಚೆಗಳನ್ನು ನಡೆಸುವ ಉನ್ನತ ಸಂಪ್ರದಾಯವನ್ನು ಅನುಸರಿಸುವಂತೆ ಸಂಸತ್ ಸದಸ್ಯರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಮೈಥಿಲಿ ಹಾಗೂ ಸಂಸ್ಕೃತ ಆವೃತ್ತಿಗಳನ್ನು ಬಿಡುಗಡೆಗೊಳಿಸಿದರು. ಸ್ಮರಣಾರ್ಥ ನಾಣ್ಯ ಹಾಗೂ ಅಂಚೆಚೀಟಿಯನ್ನು ಕೂಡಾ ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ನಾಯಕ ಜೆ.ಪಿ.ನಡ್ಡಾ, ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ರಾಜ್ಯಸಭಾದದ ಉಪಾಧ್ಯಕ್ಷ ಹರಿವಂಶ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.