ಕ್ಯಾಬ್ ಆ್ಯಪ್ ಗಳಲ್ಲಿ ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರ ನಡುವೆ ದರ ತಾರತಮ್ಯ | ತನಿಖೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆದೇಶ
ಬೆಂಗಳೂರು : ಓಲಾ, ಉಬರ್ ಮತ್ತು ರಾಪಿಡೋದಂತಹ ಕ್ಯಾಚ್ ಅಪ್ಲಿಕೇಶನ್‌ಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗಿಂತ ಐಫೋನ್ ಬಳಕೆದಾರರಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆದೇಶ ನೀಡಿದ್ದಾರೆ.
ಕ್ಯಾಬ್ ಬಳಕೆದಾರರು ಎದುರಿಸುತ್ತಿರುವ ಈ 'ಕುತೂಹಲದ' ಬೆಲೆ ವ್ಯತ್ಯಾಸದ ಬಗ್ಗೆ ವಿವರಿಸುವ ಲೇಖನವನ್ನು ಜೋಶಿ ಹಂಚಿಕೊಂಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು, "ಪ್ರಾಥಮಿಕವಾಗಿ ಗಮನಿಸಿದಾಗ ಇದರಲ್ಲೇನೋ ಮೋಸವಿರುವಂತೆ ಕಾಣುತ್ತದೆ. ಲೇಖನದಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಕ್ಯಾಬ್ ಚಾಲಕರು ವಿಭಿನ್ನ ದರಗಳನ್ನು ವಿಧಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದು ನಿಜವಾಗಿದ್ದಲ್ಲಿ ಗ್ರಾಹಕರ ತಿಳುವಳಿಕೆಯ ಹಕ್ಕನ್ನು ಕಡೆಗಣಿಸುತ್ತದೆ. ಈ ಬಗ್ಗೆ ವಿವರವಾದ ತನಿಖೆ ನಡೆಸಿ ಶೀಘ್ರದಲ್ಲಿ ವರದಿಯನ್ನು ಸಲ್ಲಿಸಲು ನಾನು CCPA ಮೂಲಕ ಜಾಗೋ ಗ್ರಹಕ್ ಜಾಗೋಗೆ ನಿರ್ದೇಶಿಸಿದ್ದೇನೆ. ಈ ರೀತಿಯ ವಂಚನೆ ಬೇರೆಲ್ಲಾದರೂ ನಡೆಯುತ್ತಿದ್ದರೆ, ಅವುಗಳ ಬಗ್ಗೆಯೂ ಪರಿಶೀಲಿಸಲು ಇಲಾಖೆಗೆ ಸೂಚಿಸಿದ್ದೇನೆ. ಆಹಾರ ವಿತರಣಾ ಅಪ್ಲಿಕೇಶನ್‌ಗಳು, ಆನ್‌ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳು ಇತ್ಯಾದಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು,"ಎಂದು ಹೇಳಿದ್ದಾರೆ.
ಈ ಕುರಿತು ವರದಿ ಮಾಡಿರುವ deccanherald, ಐಫೋನ್ ಮತ್ತು ಆಂಡ್ರಾಯ್ಡ್ ಬಳಸಿ ಏಕಕಾಲದಲ್ಲಿ ಒಂದೇ ಸ್ಥಳದಿಂದ ಒಂದೇ ಸ್ಥಳಕ್ಕೆ ಓಲಾ ಅಪ್ಲಿಕೇಷನ್ ನಲ್ಲಿ ಕ್ಯಾಬ್ ಕಾಯ್ದಿರಿಸಿತು. ಆದರೆ ಬೆಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿರುವುದನ್ನು ಕಂಡುಬಂತು.
ಐಫೋನ್ ಮಾಲೀಕರು (ಸಾಮಾನ್ಯವಾಗಿ ಆಂಡ್ರಾಯ್ಡ್ ಸಾಧನಗಳಿಗಿಂತ ಹೆಚ್ಚು ದುಬಾರಿ) ಹೆಚ್ಚು ಪಾವತಿಸಲು ಸಿದ್ಧರಿದ್ದಾರೆ ಎಂಬ ಊಹೆಯು ಒಂದು ಕಾರಣವಾಗಿರಬಹುದು ಎಂದು ಉದ್ಯಮ ತಜ್ಞರು ಈ ದರ ವ್ಯತ್ಯಾಸವನ್ನು ವಿಶ್ಲೇಷಿಸುತ್ತಾರೆ.