ಅಮೆರಿಕ ಇನ್ನು ಮುಂದೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ತಾಣವಲ್ಲ

PC : aljazeera.com \ Jason DeCrow/AP Photo
ಹೊಸದಿಲ್ಲಿ: ಅಮೆರಿಕದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಬದುಕನ್ನು ಆವರಿಸಿಕೊಂಡಿರುವ ಅನಿಶ್ಚಿತತೆಯನ್ನು ಯಾರೂ ಕೀಳಂದಾಜು ಮಾಡುವಂತಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಈ ಅನಿಶ್ಚಿತತೆ ಹೆಚ್ಚುತ್ತಲೇ ಇದ್ದು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ವಿಶ್ವಾಸಾರ್ಹರಲ್ಲ ಮತ್ತು ಅನಪೇಕ್ಷಿತ ಬಾಹ್ಯ ವ್ಯಕ್ತಿಗಳಾಗಿದ್ದಾರೆ ಎಂದು ಅನೇಕ ಅಮೆರಿಕನ್ನರು ಭಾವಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅಧಿಕಾರಾವಧಿಯಲ್ಲಿ ಈ ಅನಿಶ್ಚಿತತೆಯ ಭಾವನೆ ಅಭೂತಪೂರ್ವ ಮಟ್ಟವನ್ನು ತಲುಪಿದೆ. ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕಕ್ಕೆ ಸ್ವಾಗತಾರ್ಹರಲ್ಲ ಎಂಬಂತೆ ಕಂಡು ಬರುತ್ತಿದೆ. ಅಮೆರಿಕವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಅಸುರಕ್ಷಿತ ತಾಣವಾಗಿದೆ.
ಟ್ರಂಪ್ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಜೀವನವನ್ನು ಮೊದಲಿಗಿಂತ ಹೆಚ್ಚು ಕಷ್ಟಕರವನ್ನಾಗಿಸಿದ್ದಾರೆ. ಇದು ಆಶ್ಚರ್ಯಕರ ಬೆಳವಣಿಗೆಯೇನಲ್ಲ,ಏಕೆಂದರೆ ಒಂದು ವರ್ಷದ ಹಿಂದೆಯೇ ತನ್ನ ಚುನಾವಣಾ ಪ್ರಚಾರ ಅಭಿಯಾನದ ಸಂದರ್ಭ ಇದನ್ನೇ ಮಾಡುವುದಾಗಿ ಭರವಸೆ ನೀಡಿದ್ದರು. ವಿವಿಗಳು ಮತ್ತು ಮಾನ್ಯತೆಯನ್ನು ನೀಡುವ ವಿವಿಧ ಸಂಸ್ಥೆಗಳಲ್ಲಿ ಮಾರ್ಕ್ಸ್ ವಾದಿಗಳು ಮತ್ತು ಮೂಲಭೂತವಾದಿ ಎಡಪಂಥೀಯರು ಪ್ರಾಬಲ್ಯ ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದ ಅವರು, ಕ್ಯಾಂಪಸ್ ಗಳಲ್ಲಿ ಫೆಲೆಸ್ತೀನ್ ಏಕತಾ ಕಾರ್ಯಕರ್ತರ ಕುರಿತು ತನ್ನ ನಿರ್ದಿಷ್ಟ ದ್ವೇಷವನ್ನು ಪ್ರಚುರಗೊಳಿಸಿದ್ದರು. ಮರು ಆಯ್ಕೆಯಾದರೆ ಅಮೆರಿಕದ ಕಾಲೇಜು ಕ್ಯಾಂಪಸ್ ಗಳಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಗಳಲ್ಲಿ ಭಾಗವಹಿಸುವ ಮೂಲಭೂತವಾದಿ, ಅಮೆರಿಕ ವಿರೋಧಿ ಮತ್ತು ಯಹೂದಿ ವಿರೋಧಿ ವಿದೇಶಿಯರ ವಿದ್ಯಾರ್ಥಿ ವೀಸಾಗಳನ್ನು ರದ್ದುಗೊಳಿಸುವುದಾಗಿ ಟ್ರಂಪ್ ಅಕ್ಟೋಬರ್ 2023ರಷ್ಟು ಹಿಂದೆಯೇ ಘೋಷಿಸಿದ್ದರು.
ಶ್ವೇತಭವನಕ್ಕೆ ಮರಳಿದ ಬಳಿಕ ಟ್ರಂಪ್ ಫೆಲೆಸ್ತೀನ್ ಪರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಗುರಿಯಾಗಿಸಿಕೊಳ್ಳುವುದನ್ನು ಆದ್ಯತೆಯನ್ನಾಗಿಸಿಕೊಂಡಿದ್ದಾರೆ.
ಕೊಲಂಬಿಯಾ ವಿವಿಯ ಪದವೀಧರ, ಗ್ರೀನ್ ಕಾರ್ಡ್ ಹೊಂದಿರುವ ಮಹಮೂದ್ ಖಲೀಲ್, ಟಫ್ಟ್ಸ್ ವಿವಿಯ ಪಿ ಎಚ್ ಡಿ ವಿದ್ಯಾರ್ಥಿನಿ ಟರ್ಕಿಯ ರುಮೇಯಿಸಾ ಒಜ್ಟರ್ಕ್ ಅಮೆರಿಕದ ವಲಸೆ ಅಧಿಕಾರಿಗಳಿಂದ ಅಪಹರಣಗೊಂಡು ಬಂಧಿಸಲ್ಪಟ್ಟ ಬಳಿಕ ಲೂಸಿಯಾನಾದ ಬಂಧನ ಕೇಂದ್ರದಲ್ಲಿ ಕೊಳೆಯುತ್ತಿದ್ದರೆ, ಭಾರತೀಯ ಪ್ರಜೆ ಹಾಗೂ ಜಾರ್ಜ್ಟೌನ್ ವಿವಿಯ ಪೋಸ್ಟ್ ಡಾಕ್ಟರಲ್ ವಿದ್ವಾಂಸ ಬದರ್ ಖಾನ್ ಸೂರಿ ಅವರನ್ನು ಟೆಕ್ಸಾಸ್ ನ ಬಂಧನ ಕೇಂದ್ರದಲ್ಲಿರಿಸಲಾಗಿದೆ.
ಈ ಪೈಕಿ ಖಲೀಲ್ ಟ್ರಂಪ್ ರ ಪ್ರಮುಖ ಗುರಿಗಳಲ್ಲಿ ಓರ್ವರಾಗಿದ್ದು, ಕೊಲಂಬಿಯಾ ವಿವಿ ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವೆ ಸಂಧಾನಕಾರರಾಗಿ ಫೆಲೆಸ್ತೀನ್ ಪರ ಪ್ರತಿಭಟನೆಗಳ ಮುಂಚೂಣಿಯಲ್ಲಿದ್ದರು. ಟಫ್ಟ್ಸ್ ವಿವಿಯ ದೈನಿಕದಲ್ಲಿ ಫೆಲೆಸ್ತೀನ್ ಪರ ಲೇಖನದ ಸಹಲೇಖಕಿಯಾಗಿದ್ದು ಒಝ್ಟರ್ಕ್ ಮಾಡಿದ್ದ ತಪ್ಪಾಗಿತ್ತು.
ಆದರೆ ಸೂರಿ ಫೆಲೆಸ್ತೀನ್ ಪರ ಪ್ರತಿಭಟನೆಗಳಲ್ಲಿ ಭಾಗಿಯಾಗಿರಲೇ ಇಲ್ಲ. ಗಾಝಾದಲ್ಲಿಯ ಹಮಾಸ್ ಸರಕಾರದ ಮಾಜಿ ಸಲಹೆಗಾರ ಅಹ್ಮದ್ ಯೂಸುಫ್ ಅವರ ಅಳಿಯನಾಗಿದ್ದೇ ಸೂರಿಯವರ ಅಪರಾಧವಾಗಿರುವಂತಿದೆ. ಆದರೆ ಯೂಸುಫ್ ಹಮಾಸ್ ನ ರಾಜಕೀಯ ವಿಭಾಗದಲ್ಲಿಯ ತನ್ನ ಹುದ್ದೆಯನ್ನು ದಶಕಕ್ಕೂ ಹಿಂದೆಯೇ ತೊರೆದಿದ್ದರು. ಅ.7,2023ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ್ದ ದಾಳಿಯನ್ನು ಯೂಸುಫ್ ‘ಘೋರ ತಪ್ಪು’ ಎಂದು ಬಣ್ಣಿಸಿದ್ದರು.
ಬ್ರಿಟನ್ ಮತ್ತು ಗಾಂಬಿಯಾದ ದ್ವಿಪೌರತ್ವ ಹೊಂದಿರುವ ಕಾರ್ನೆಲ್ ವಿವಿಯ ಪಿ ಎಚ್ ಡಿ ವಿದ್ಯಾರ್ಥಿ ಮಮುದು ತಾಲ್ ಫೆಲೆಸ್ತೀನ್ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು. ಶರಣಾಗುವಂತೆ ವಲಸೆ ಅಧಿಕಾರಿಗಳು ಅವರಿಗೆ ಕರೆ ನೀಡಿದ್ದು. ತನ್ನ ವೈಯಕ್ತಿಕ ಸುರಕ್ಷತೆಯ ಭೀತಿಯಿಂದ ಎರಡೂವರೆ ವಾರಗಳ ಕಾಲ ತಲೆಮರೆಸಿಕೊಂಡಿದ್ದ ತಾಲ್ ಅಮೆರಿಕವನ್ನು ತೊರೆಯಲು ನಿರ್ಧರಿಸಿದ್ದಾರೆ.
ಈ ಕೆಲವು ಹೈಪ್ರೊಫೈಲ್ ಪ್ರಕರಣಗಳು ಮಂಜುಗಡ್ಡೆಯ ತುದಿಯಷ್ಟೇ. ಟ್ರಂಪ್ ಆಡಳಿತವು ಫೆಲೆಸ್ತೀನ್ ಪರ ಚಟುವಟಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಿಗಾಗಿ ನೂರಾರು ಅಂತರರಾಷ್ಟ್ರೀಯ ವಿದ್ಯಾಥಿಗಳ ವೀಸಾಗಳನ್ನು ರದ್ದುಗೊಳಿಸಿದೆ. ಎ.10ರ ವೇಳೆಗೆ ದೇಶಾದ್ಯಂತ 100ಕ್ಕೂ ಅಧಿಕ ಕಾಲೇಜುಗಳು ಮತ್ತು ವಿವಿಗಳ 600ಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾಗಳು ರದ್ದುಗೊಂಡಿವೆ ಎನ್ನಲಾಗಿದೆ. ಇದಕ್ಕೆ ಅಂತ್ಯವಿಲ್ಲ ಎಂಬಂತೆ ತೋರುತ್ತಿದೆ. ಆಂತರಿಕ ಭದ್ರತಾ ಇಲಾಖೆಯು ಅಮೆರಿಕದ ಪ್ರಜೆಗಳಲ್ಲದವರ ಸಾಮಾಜಿಕ ಮಾಧ್ಯಮ ಖಾತೆಗಳ ಪರಿಶೀಲನೆಯನ್ನು ಆರಂಭಿಸಿದ್ದು,ಫೆಲೆಸ್ತೀನ್ ಪರ ಅಥವಾ ಯಹೂದಿ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂದು ತಾನು ಪರಿಗಣಿಸುವ ಎಲ್ಲ ವ್ಯಕ್ತಿಗಳಿಗೆ ವೀಸಾ ಮತ್ತು ಗ್ರೀನ್ ಕಾರ್ಡ್ ಗಳನ್ನು ನಿರಾಕರಿಸುವುದಾಗಿ ಹೇಳಿದೆ.
ಈ ನಡುವೆ ಅಮೆರಿಕದ ಪ್ರಮುಖ ವಿವಿಗಳು ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯಲು ಸಿದ್ಧವಿರುವಂತೆ ಕಂಡು ಬರುತ್ತಿದೆ. ಆಡಳಿತದೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಲು ಮತ್ತು ಫೆಡರಲ್ ಅನುದಾನವನ್ನು ಉಳಿಸಿಕೊಳ್ಳಲು ಅವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಅಪಾಯಕ್ಕೆ ತಳ್ಳುತ್ತಿವೆ.
ಉದಾಹರಣೆಗೆ ಕೊಲಂಬಿಯಾ ವಿವಿಯು ಫೆಲೆಸ್ತೀನ್ ಪರ ಪ್ರತಿಭಟನೆಗಳ ಸಂದರ್ಭದಲ್ಲಿ ಅದು ನಿಷ್ಕ್ರಿಯವಾಗಿತ್ತೆಂಬ ಆರೋಪದಲ್ಲಿ ಟ್ರಂಪ್ ಆಡಳಿತವು ಅದರ 400 ಮಿಲಿಯನ್ ಡಾಲರ್ ಗಳ ಫೆಡರಲ್ ಅನುದಾನವನ್ನು ತಡೆಹಿಡಿಯಲು ನಿರ್ಧರಿಸಿದಾಗ ತಕ್ಷಣವೇ ಶರಣಾಗಿತ್ತು. ಸುಮಾರು 15 ಬಿಲಿಯನ್ ಡಾಲರ್ ಗಳ ದತ್ತಿ ನಿಧಿಯನ್ನು ಹೊಂದಿದ್ದರೂ ವಿವಿಯ ಪ್ರತಿಭಟನಾ ನೀತಿಗಳನ್ನು ಪರಿಷ್ಕರಿಸುವ ಮತ್ತು ಕ್ಯಾಂಪಸ್ ನಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಗಳ ಸಂಭಾವ್ಯ ಮರಳುವಿಕೆಯನ್ನು ಹತ್ತಿಕ್ಕಲು ಹೊಸ ಸುರಕ್ಷತಾ ಕ್ರಮಗಳನ್ನು ಪರಿಚಯಿಸುವ ಮೂಲಕ ಟ್ರಂಪ್ ರ ಅನುದಾನ ಬೆದರಿಕೆಗಳಿಗೆ ವಿವಿಯ ನಾಯಕತ್ವವು ಸ್ಪಂದಿಸಿತ್ತು.
ಕೊಲಂಬಿಯಾ, ಹಾರ್ವರ್ಡ್ ಸೇರಿದಂತೆ ಅಮೆರಿಕದ ಪ್ರತಿಷ್ಠಿತ ವಿವಿಗಳು ಟ್ರಂಪ್ ಅವರ ಒತ್ತಡಕ್ಕೆ ಮಣಿದಿರುವ ರೀತಿಯು ಈ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ಭವಿಷ್ಯದ ಪೀಳಿಗೆಯ ಬುದ್ಧಿಶಕ್ತಿ ಮತ್ತು ದೃಷ್ಟಿಕೋನಗಳನ್ನು ಉತ್ತಮಗೊಳಿಸುವುದನ್ನು ತಮ್ಮ ಪ್ರಾಥಮಿಕ ಉದ್ದೇಶವನ್ನಾಗಿ ಪರಿಗಣಿಸುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿದೆ. ವಾಸ್ತವದಲ್ಲಿ ಈ ವಿವಿಗಳು ತಾವು ಮಾನವತೆಯ ಸಾಮೂಹಿಕ ಭವಿಷ್ಯದ ಸುಧಾರಣೆಗೆ ಬದ್ಧವಾಗಿರುವ ಸ್ವತಂತ್ರ ಉನ್ನತ ಶಿಕ್ಷಣ ಸಂಸ್ಥೆಗಳಾಗಿ ಉಳಿದಿಲ್ಲ,ಕೇವಲ ಹಣವನ್ನು ಪಾವತಿಸುವ ಗ್ರಾಹಕ(ವಿದ್ಯಾರ್ಥಿ)ನಿಗೆ ಉತ್ಪನ್ನ(ಕಾಲೇಜು ಪದವಿ)ವನ್ನು ಮಾರಾಟ ಮಾಡುವ ವಾಣಿಜ್ಯ ಸಂಸ್ಥೆಗಳಾಗಿದ್ದೇವೆ ಎನ್ನುವುದನ್ನು ಸಾಬೀತುಗೊಳಿಸಿವೆ. ಇದೇ ಕಾರಣದಿಂದ ಈ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಪಾವತಿಸುವ ಬೋಧನಾ ಶುಲ್ಕಕ್ಕಿಂತ ಹೆಚ್ಚಿನ ಹಣ ತಮ್ಮ ಅನುದಾನ ನಿಧಿಯಿಂದ ವೆಚ್ಚವಾಗುತ್ತಿದೆ ಎಂಬ ಲೆಕ್ಕಾಚಾರದೊಂದಿಗೆ ಈ ವಿವಿಗಳ ಆಡಳಿತಗಳು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಅವರ ಹಣೆಬರಹಕ್ಕೆ ಬಿಡಲು ನಿರ್ಧರಿಸಿರುವುದು ಅಚ್ಚರಿಯೇನಲ್ಲ.
ಫೆಲೆಸ್ತೀನ್ ಪರ ಚಟುವಟಿಗಳಿಗೆ ಸಂಬಂಧಿಸಿದಂತೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಟ್ರಂಪ್ ಆಡಳಿತದ ಗದಾ ಪ್ರಹಾರವು ವೈವಿಧ್ಯತೆ,ಸಮಾನತೆ ಮತ್ತು ಸೇರ್ಪಡೆ ಉಪಕ್ರಮಗಳ ಮೇಲೆ ದಾಳಿಗಳ ಸಮಯದಲ್ಲಿಯೇ ನಡೆದಿದೆ. ಈ ಉಪಕ್ರಮಗಳು ಈ ಎಲ್ಲ ವರ್ಷಗಳಲ್ಲಿ ಅಮೆರಿಕದ ವಿವಿಗಳು ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ವಿದೇಶಿ ವಿದ್ಯಾರ್ಥಿಗಳನ್ನು ಸ್ವಲ್ಪ ಹೆಚ್ಚಾಗಿಯೇ ಸ್ವಾಗತಿಸುವಂತೆ ಮಾಡಿದ್ದವು. ಒಟ್ಟಾರೆಯಾಗಿ ಈ ನೀತಿಗಳು ವಿದೇಶಿ ವಿದ್ಯಾರ್ಥಿಗಳಿಗೆ,ವಿಶೇಷವಾಗಿ ದಕ್ಷಿಣ ಗೋಳಾರ್ಧದಿಂದ ಬಂದವರಿಗೆ ಅಮೆರಿಕದ ಕ್ಯಾಂಪಸ್ ಗಳನ್ನು ಪ್ರತಿಕೂಲ ವಾತಾವರಣಗಳನ್ನಾಗಿ ಪರಿವರ್ತಿಸಿವೆ.
ಇವೆಲ್ಲ ದೃಷ್ಟಿಗಳಿಂದ ಅಮೆರಿಕದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಜೀವನ ಸಹಿಸಿಕೊಳ್ಳಲಾಗದಷ್ಟು ಅನಿಶ್ಚಿತವಾಗಿರುವಂತೆ ಕಂಡು ಬರುತ್ತಿದೆ. ಟ್ರಂಪ್ ಆಡಳಿತದ ಕಠಿಣ ಕ್ರಮಗಳು ಫೆಲೆಸ್ತೀನ್ ಪರ ಭಾಷಣಗಳು ಮತ್ತು ಪ್ರತಿಭಟನೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ. ಒಂದು ಪೂರ್ವ ನಿದರ್ಶನವನ್ನು ಸ್ಥಾಪಿಸಲಾಗಿದೆ. ಇಂದು ಅಮೆರಿಕದಲ್ಲಿರುವ ಪ್ರತಿಯೊಬ್ಬ ಅಂತರರಾಷ್ಟ್ರೀಯ ವಿದ್ಯಾರ್ಥಿಯು ಪ್ರತಿಭಟನೆಯನ್ನು ಭಾಗಿಯಾಗಿದ್ದಕ್ಕಾಗಿ,ಶ್ವೇತಭವನ ಮತ್ತು ಅದರ ಮಿತ್ರರನ್ನು ಅಸಮಾಧಾನಗೊಳಿಸುವ ಲೇಖನಕ್ಕಾಗಿ ಅಥವಾ ಅಭಿಪ್ರಾಯಕ್ಕಾಗಿ ಯಾವುದೇ ಕ್ಷಣದಲ್ಲಿಯೂ ತಮ್ಮನ್ನು ಅಪಹರಿಸಬಹುದು,ಬಂಧಿಸಬಹುದು ಮತ್ತು ಗಡಿಪಾರು ಮಾಡಬಹುದು ಎನ್ನುವುದನ್ನು ಸ್ವೀಕರಿಸಲೇಬೇಕಿದೆ. ಸಂಬಂಧಿಯೋರ್ವರ ಹಿಂದಿನ ಉದ್ಯೋಗಕ್ಕಾಗಿಯೂ ಅವರನ್ನು ಬಂಧಿಸಬಹುದು ಮತ್ತು ಗಡಿಪಾರು ಬೆದರಿಕೆಯನ್ನು ಹಾಕಬಹುದು.ಈ ವಿದ್ಯಾರ್ಥಿಗಳ ಪಾಲಿಗೆ ಯಾವುದೇ ಅರ್ಥಪೂರ್ಣ ಕಾನೂನು ನೆರವು ಅಥವಾ ಅಲ್ಪಾವಧಿಯ ಪರಿಹಾರ ಮಾರ್ಗ ಕಂಡು ಬರುತ್ತಿಲ್ಲ. ಆದ್ದರಿಂದ ಭವಿಷ್ಯದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣವು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಳ್ಳುವಷ್ಟು ಯೋಗ್ಯವೇ ಎಂದು ಸಹಜವಾಗಿಯೇ ಅಚ್ಚರಿ ಪಡಬಹುದು.