ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಿಯೋಜಿಸಲಾಗಿರುವ ಕ್ಯಾಮೆರಾಗಳಿಂದ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ : ಅಧ್ಯಯನ ವರದಿ

Update: 2024-11-26 18:37 GMT

PC : telegraphindia 

ಹೊಸದಿಲ್ಲಿ: ವನ್ಯಜೀವಿಗಳ ಅಧ್ಯಯನಕ್ಕಾಗಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಸುತ್ತ ಅರಣ್ಯ ಇಲಾಖೆ ನಿಯೋಜಿಸಿರುವ ಕ್ಯಾಮೆರಾಗಳು ಹಾಗೂ ಡ್ರೋನ್ ಗಳು ಮಹಿಳೆಯರ ಸಾಮಾಜಿಕ ನಿಯಂತ್ರಣ ಮತ್ತು ಅನೈತಿಕ ಪೊಲೀಸ್ ಗಿರಿಯ ಸಾಧನಗಳಾಗಿ ಬಳಕೆಯಾಗುತ್ತಿದ್ದು, ಆತಂಕಕಾರಿ ವಿಕೃತ ಲೈಂಗಿಕ ವರ್ತನೆಗೂ ಸಾಧನಗಳಾಗಿ ಪರಿಣಮಿಸಿವೆ ಎಂದು 14 ತಿಂಗಳ ಅಧ್ಯಯನದ ನಂತರ ಸಂಶೋಧಕರು ಎಚ್ಚರಿಸಿದ್ದಾರೆ.

ಮಹಿಳೆಯರನ್ನು ಬೆದರಿಸಲು ಹಾಗೂ ಅವರ ಮೇಲೆ ನಿಗಾ ಇಡಲು ಕ್ಯಾಮೆರಾಗಳು ಹಾಗೂ ಡ್ರೋನ್ ಗಳನ್ನು ಉದ್ದೇಶಪೂರ್ವಕವಾಗಿ ಬಳಸುತ್ತಿರುವುದರಿಂದ ಉತ್ತರಾಖಂಡದಲ್ಲಿನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಗ್ರಾಮಗಳ ಮಹಿಳೆಯರ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆ ಎಂದು ಬ್ರಿಟನ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

ಮಹಿಳೆಯರು, ಪುರುಷರು, ಸಾಮಾಜಿಕ ಹಕ್ಕು ಕಾರ್ಯಕರ್ತರು, ಅರಣ್ಯ ರಕ್ಷಕರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿರುವ 270 ಸಂದರ್ಶನಗಳನ್ನು ಆಧರಿಸಿರುವ ಅವರ ಸಂಶೋಧನೆಯು, ನಿಗಾವಣೆ ತಂತ್ರಜ್ಞಾನವು ಮಹಿಳೆಯರ ಖಾಸಗಿತನದ ಮೇಲೆ ಆಕ್ರಮಣ ಮಾಡುತ್ತಿದ್ದು, ಇದರಿಂದ ಮಹಿಳೆಯರು ಅರಣ್ಯಗಳಲ್ಲಿನ ತಮ್ಮ ವರ್ತನೆಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ ಹಾಗೂ ಆ ಮೂಲಕ ಅವರು ಪ್ರಾಣಿಗಳ ದಾಳಿಗೊಳಗಾಗುವ ಅಪಾಯವನ್ನು ಹೆಚ್ಚಳ ಮಾಡಿದೆ ಎಂಬುದರತ್ತ ಬೊಟ್ಟು ಮಾಡಿದೆ.

“ಕ್ಯಾಮೆರಾಗಳು ಹಾಗೂ ಡ್ರೋನ್ ಗಳು ಸಮಾಜದ ಪುರುಷ ಪ್ರಧಾನ ಮನಸ್ಥಿತಿಯನ್ನು ಅರಣ್ಯದೊಳಕ್ಕೂ ವಿಸ್ತರಿಸಿವೆ” ಎನ್ನುತ್ತಾರೆ ಈ ಅಧ್ಯಯನದ ನೇತೃತ್ವ ವಹಿಸಿದ್ದ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ ಡಾರ್ವಿನ್ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ಸಹ ಸಂಶೋಧಕರಾಗಿರುವ ತ್ರಿಶಾಂತ್ ಸಿಮ್ಲೈ. ಇದರಿಂದಾಗಿ ಮಹಿಳೆಯರು ತಪ್ಪಿಸಿಕೊಳ್ಳಲು ಹಾಗೂ ಸ್ವತಂತ್ರವಾಗಿರಲು ಯಾವುದನ್ನು ಖಾಸಗಿ ಸ್ಥಳಗಳು ಎಂದು ಭಾವಿಸಿದ್ದರೋ, ಅವುಗಳನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದೂ ಅವರು ಅಭಿಪ್ರಾಯ ಪಡುತ್ತಾರೆ.

ʼEnvironment and Planning Fʼ ವಾರ್ತಾಪತ್ರದಲ್ಲಿ ಸೋಮವಾರ ಪ್ರಕಟಗೊಂಡಿರುವ ಈ ಅಧ್ಯಯನ ವರದಿಯು, ಮಹಿಳೆಯರು ಅರಣ್ಯ ಉತ್ಪನ್ನಗಳ ಸಂಗ್ರಹ, ಖಾಸಗಿತನ ಅನುಭವಿಸಲು ಅಥವಾ ಪುರುಷ ಪ್ರಧಾನ ದೌರ್ಜನ್ಯದಿಂದ ಪಾರಾಗಲು ಅರಣ್ಯವನ್ನು ಬಹು ಆಯಾಮದ ಸ್ಥಳವನ್ನಾಗಿ ಬಳಸುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿದೆ.

“ಮಹಿಳೆಯರು ಅರಣ್ಯಕ್ಕೆ ಭೇಟಿ ನೀಡಿದಾಗ ಹಾಡುಗಳನ್ನು ಹಾಡಬಹುದು, ತಮ್ಮ ಪ್ರಿಯಕರನೊಂದಿಗೆ ಪ್ರಣಯದಲ್ಲಿ ತೊಡಗಬಹುದು ಅಥವಾ ತಮ್ಮ ಗ್ರಾಮಗಳಲ್ಲಿ ಮುಕ್ತವಾಗಿ ಚರ್ಚಿಸಲಾಗದ ವಿಷಯಗಳ ಕುರಿತು ಮಾತುಕತೆ ನಡೆಸಬಹುದು. ಉದಾಹರಣೆಗೆ, ತಮ್ಮ ಮಾವಂದಿರಿಗೆ ಸಂಬಂಧಿಸಿದ ವಿಷಯಗಳ ಕುರಿತು” ಎಂದು ಸಿಮ್ಲೈ ಹೇಳುತ್ತಾರೆ. “ನಿಗಾವಣೆಯು ಇಂತಹ ರೂಢಿಗಳಿಗೆ ಅಡಚಣೆಯುಂಟು ಮಾಡಿದ್ದು, ವನ್ಯಜೀವಿಗಳ ದಾಳಿ ಅಪಾಯದ ಸಾಧ್ಯತೆಯನ್ನು ಅಧಿಕಗೊಳಿಸಿದೆ” ಎಂದೂ ಅವರು ಅಭಿಪ್ರಾಯ ಪಡುತ್ತಾರೆ.

ಹುಲಿ ಸೇರಿದಂತೆ ವನ್ಯಜೀವಿಗಳ ಮೇಲೆ ನಿಗಾ ಇಡಲು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದೊಳಗೆ ಹಾಗೂ ಸುತ್ತಮುತ್ತ ಅರಣ್ಯ ಇಲಾಖೆ ನಿಯೋಜಿಸಿರುವ ಕ್ಯಾಮೆರಾಗಳು ನಮ್ಮತ್ತ ಕಣ್ಣಿಡುವ ಅಪಾಯಕ್ಕೊಳಗಾಗುತ್ತಿದ್ದೇವೆ ಎಂದು ಅನ್ನಿಸುತ್ತದೆ ಎಂದು ಅಧ್ಯಯನಕ್ಕಾಗಿ ಸಂದರ್ಶನ ನಡೆಸಲಾಗಿರುವ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಜೋರಾಗಿ ಹಾಡುವುದು ವನ್ಯ ಜೀವಿಗಳು ಮಹಿಳೆಯರ ಸಮೀಪ ಬರುವುದನ್ನು ತಪ್ಪಿಸುತ್ತದೆ. ಆದರೆ, ಕ್ಯಾಮೆರಾಗಳು ಉಪಸ್ಥಿತಿಯು ಮಹಿಳೆಯರು ಮಾಮೂಲಿಗಿಂತ ಸಣ್ಣ ದನಿಯಲ್ಲಿ ಹಾಡುವಂತೆ ಇಲ್ಲವೆ ಮಾತಾಡುವಂತೆ ಮಾಡಿವೆ ಎಂದು ಸಂಶೋಧಕರು ಹೇಳಿದ್ದಾರೆ. ಇದರಿಂದ ಮಹಿಳೆಯರು ಆನೆಗಳು ಅಥವಾ ಹುಲಿಗಳ ದಾಳಿಗೊಳಗಾಗುವ ಅಪಾಯ ಅಧಿಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಕ್ಯಾಮೆರಾಗಳ ಕಣ್ಣು ತಪ್ಪಿಸಲು ಪದೇ ಪದೇ ತಮಗೆ ಪರಿಚಯವಿಲ್ಲದ ಹಾಗೂ ತೀರಾ ಒಳಗಿನ ಅರಣ್ಯ ಪ್ರದೇಶಗಳಿಗೆ ಹೊಕ್ಕುತ್ತಿದ್ದಾರೆ ಎನ್ನಲಾಗಿದೆ.

ಆನೆಗಳು ಅಥವಾ ಹುಲಿಗಳು ಭೇಟಿ ನೀಡುವ ತೊರೆಯ ತೀರಗಳ ಬಳಿ ಅರಣ್ಯ ಪ್ರಾಧಿಕಾರಗಳು ಪದೇ ಪದೇ ಕ್ಯಾಮೆರಾಗಳನ್ನು ನಿಯೋಜಿಸುತ್ತಿವೆ. ಆದರೆ, ಇಂತಹ ತೊರೆಯ ತೀರಗಳು ಮಹಿಳೆಯರು ಅರಣ್ಯಗಳನ್ನು ಪ್ರವೇಶಿಸಲು ಪ್ರಮುಖ ಪ್ರವೇಶ ಮತ್ತು ನಿರ್ಗಮನ ಬಿಂದುಗಳೂ ಆಗಿವೆ.

2017ರಲ್ಲಿ ಸುಧಾರಿಸಿಕೊಳ್ಳುತ್ತಿದ್ದ ಮಹಿಳೆಯೊಬ್ಬರ ದೃಶ್ಯವನ್ನು ತೊರೆಯ ಬಳಿಯಿದ್ದ ಕ್ಯಾಮೆರಾ ಸೆರೆ ಹಿಡಿದಿತ್ತು. ಈ ದೃಶ್ಯವನ್ನು ಯುವಕನೊಬ್ಬ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ. ಇದರಿಂದ ಕುಪಿತಗೊಂಡಿದ್ದ ಗ್ರಾಮಸ್ಥರು ಕ್ಯಾಮೆರಾಗಳನ್ನು ನಾಶಗೊಳಿಸಿ, ಅರಣ್ಯ ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡಿದ್ದ ಘಟನೆ ನಡೆದಿತ್ತು.

“ನಮ್ಮ ಗ್ರಾಮದ ಮಹಿಳೆಯರು ಸುಧಾರಿಸಿಕೊಳ್ಳಲೆಂದು ತೆರಳುವ ಸ್ಥಳಗಳಲ್ಲಿ ಡ್ರೋನ್ ಹಾರಿಸಿ ಅವರೇನು ನಿಗಾ ವಹಿಸಲು ಬಯಸುತ್ತಿದ್ದಾರೆ?” ಎಂದು ಸ್ಥಳೀಯ ಗ್ರಾಮಸ್ಥರೊಬ್ಬರು ಪ್ರಶ್ನಿಸಿರುವುದನ್ನು ಸಿಮ್ಲೈ ತಮ್ಮ ಅಧ್ಯಯನ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ.

ವನ್ಯಜೀವಿಗಳ ಮೇಲೆ ನಿಗಾ ವಹಿಸಲು ವಿಶ್ವಾದಾದ್ಯಂತ ಕ್ಯಾಮೆರಾಗಳು ಹಾಗೂ ಡ್ರೋನ್ ಗಳನ್ನು ನಿಯೋಜಿಸುವುದು ವಾಡಿಕೆಯಾಗಿದೆ. ಆದರೆ, ಅವು ಅನುದ್ದೇಶಿತ ಹಾನಿಯನ್ನುಂಟು ಮಾಡಬಾರದು ಎಂಬುದರ ಮೇಲೆ ಈ ಅಧ್ಯ ಯನ ಬೆಳಕು ಚೆಲ್ಲಿದೆ ಎಂದು ಅಧ್ಯಯನ ವರದಿಯ ಸಹ ಲೇಖಕರಾದ ಡಾರ್ವಿನ್ ಕಾಲೇಜಿನಲ್ಲಿ ಸಂರಕ್ಷಣೆ ಮತ್ತು ಸಮಾಜ ವಿಭಾಗದ ಪ್ರಾಧ್ಯಾ ಪಕರಾಗಿರುವ ಕ್ರಿಸ್ ಸ್ಯಾಂಡ್ ಬ್ರೂಕ್ ಅಭಿಪ್ರಾಯ ಪಡುತ್ತಾರೆ.

ಕೌಟುಂಬಿಕ ದೌರ್ಜನ್ಯವನ್ನು ದಾಖಲಿಸಲು ಮಹಿಳೆಯೊಬ್ಬಳು ತನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದ ತನ್ನ ಪತಿಯನ್ನು ಕ್ಯಾಮೆರಾ ಎದುರಿಗೆ ಕರೆದೊಯ್ದಿರುವ ಏಕೈಕ ಘಟನೆಯೂ ಈ ಅಧ್ಯಯನದಲ್ಲಿ ದಾಖಲಾಗಿದೆ.

ಅಪರಾಧ ನಿಯಂತ್ರಣ, ಕೆಲಸದ ಸ್ಥಳಗಳಲ್ಲಿ ನಿಗಾವಣೆ ಹಾಗೂ ಸಾರ್ವಜನಿಕ ಸುರಕ್ಷತೆಗಾಗಿ ನಗರ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ತಂತ್ರಜ್ಞಾನದ ಪರಿಣಾಮ ಕುರಿತು ಹಲವು ಅಧ್ಯಯನಗಳು ನಡೆದಿವೆ. ಆದರೆ, ಅರಣ್ಯದಲ್ಲಿನ ನಿಗಾವಣೆ ತಂತ್ರಜ್ಞಾನದಿಂದ ಆಗುತ್ತಿರುವ ಪರಿಣಾಮವನ್ನು ಪರಿಶೀಲಿಸಲು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿರುವ ಅಧ್ಯಯನವು ಅರಣ್ಯ ನಿಗಾವಣೆ ತಂತ್ರಜ್ಞಾನದ ಕುರಿತು ನಡೆದಿರುವ ಪ್ರಪ್ರಥಮ ಅಧ್ಯಯನವಾಗಿದೆ ಎಂದು ಸಿಮ್ಲೈ ಹೇಳುತ್ತಾರೆ.

ಸೌಜನ್ಯ: telegraphindia.com

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News