ಸೇನಾ ಶಿಬಿರದಿಂದ ವ್ಯಕ್ತಿ ನಾಪತ್ತೆ | ಮಣಿಪುರ ಮತ್ತೆ ಉದ್ವಿಗ್ನ
ಗುವಾಹಟಿ : ಜನಾಂಗೀಯ ಸಂಘರ್ಷದಿಂದ ಜರ್ಜರಿತವಾಗಿರುವ ಮಣಿಪುರದಲ್ಲಿ ಸೇನೆಯ ಲೀಮಖಾಂಗ್ ಶಿಬಿರದ 57 ಮೌಂಟೇನ್ ಡಿವಿಷನ್ಗೆ ಸೇರಿದ ಮೈತೈ ಸಮುದಾಯದ ವ್ಯಕ್ತಿಯೊಬ್ಬರು ಕಳೆದ 24 ಗಂಟೆಗಳಿಂದ ನಾಪತ್ತೆಯಾಗಿರುವುದು ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.
ಲೈಶ್ರಮ್ ಕಮಲ್ಬಾಬು (56) ಎಂಬ ವ್ಯಕ್ತಿ ಇಂಫಾಲ್ ಪಶ್ಚಿಮ ಜಿಲೆಯ ಲೊಯಿತಾಂಗ್ ಖುನೋವ್ ಗ್ರಾಮದ ನಿವಾಸಿ. ಇವರು ಸೇನಾ ಶಿಬಿರದಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ 2 ಗಂಟೆಗೆ ಲೀಮಖಾಂಗ್ ಸೇನಾ ಶಿಬಿರಕ್ಕೆ ಕೆಲಸಕ್ಕೆ ಹೋದಾಗಿನಿಂದ ಕಮಲ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಇದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
"ಕೇಂದ್ರೀಯ ಪಡೆಗಳು ಮತ್ತು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ" ಎಂದು ಕಂಗ್ಪೋಕ್ಪಿ ಜಿಲ್ಲಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಲೀಮಖಾಂತ್ ಪ್ರದೇಶ ಕುಕಿ ಪ್ರಾಬಲ್ಯದ ಕಂಗ್ಪೋಕ್ಪಿ ಮತ್ತು ಮೈತೈ ಪ್ರಾಬಲ್ಯದ ಪಶ್ಚಿಮ ಇಂಫಾಲ್ ಜಿಲ್ಲೆಯ ಗಡಿಯಲ್ಲಿದೆ.
ಈ ಕಣ್ಮರೆ ಪ್ರಕರಣ ದೊಡ್ಡ ಪ್ರಮಾಣದ ಆಕ್ರೋಶಕ್ಕೆ ಕಾರಣವಾಗಿದ್ದು, ಬಹುತೇಕ ಸಂಖ್ಯೆಯಲ್ಲಿರುವ ಮಹಿಳೆಯರು ಸೇರಿದಂತೆ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಮುಂಜಾನೆ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಿದ ಉದ್ರಿಕ್ತರು, ನಾಪತ್ತೆಯಾದ ವ್ಯಕ್ತಿಯ ಚಲನ ವಲನಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
"ಎಂದಿನಂತೆ ಕಮಲ್ ಲೀಮಖಾಂಗ್ ಸೇನಾ ಶಿಬಿರದ ಒಂದನೇ ಗೇಟಿನ ಮೂಲಕ ಪ್ರವೇಶಿಸಿದ್ದಾರೆ. ಸೋಮವಾರ ಬೆಳಿಗ್ಗೆ 9.30ಕ್ಕೆ ಮುಖ್ಯದ್ವಾರದಲ್ಲಿ ಆತ ನೋಂದಾಯಿಸಿಕೊಂಡಿದ್ದಾನೆ ಎನ್ನುವುದು ವಿಚಾರಣೆಯಿಂದ ತಿಳಿದು ಬಂದಿದೆ. ಆದಾಗ್ಯೂ ಮಧ್ಯಾಹ್ನ 2.00 ಗಂಟೆಯ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಕಮಲ್ ಅವರ ಚಲನ ವಲನ ಪತ್ತೆ ಮಾಡುವಂತೆ ಸೇನೆಗೆ ಕೋರಿಕೊಂಡಿದ್ದೇವೆ" ಎಂದು ಪ್ರತಿಭಟನಾ ನಿರತ ಮಹಿಳೆ ಕಾಂತೊ ಸಬಾಲ್ ಹೇಳಿದ್ದಾರೆ.
ಅವರ ಜತೆ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕಮಲ್ ಅವರನ್ನು ಮಧ್ಯಾಹ್ನ 1.30ಕ್ಕೆ ಭೇಟಿಯಾಗಿದ್ದಾಗಿ ಹೇಳಿದ್ದಾರೆ. ಆ ಬಳಿಕ ಅವರನ್ನು ಕಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.