ಬಾಂಗ್ಲಾದೇಶ : ಇಸ್ಕಾನ್ ಮುಖ್ಯಸ್ಥರ ಬಂಧನ ವಿರುದ್ಧ ಪ್ರತಿಭಟನೆ | ಸಂಘರ್ಷದಲ್ಲಿ ವಕೀಲ ಮೃತ್ಯು

Update: 2024-11-27 02:48 GMT

Photo : x@Drsr_Official

ಢಾಕಾ: ಇಸ್ಕಾನ್ ಮುಖ್ಯಸ್ಥ ಚಿನ್ಮಯ್ ಕೃಷ್ಣದಾಸ್ ಅವರನ್ನು ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಬಾಂಗ್ಲಾದೇಶದ ಬಂದರು ನಗರವಾದ ಚಿತ್ತಗಾಂಗ್‍ನಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಹಿಂಸಾಚಾರದಲ್ಲಿ ವಕೀಲರೊಬ್ಬರು ಜೀವ ಕಳೆದುಕೊಂಡಿದ್ದಾರೆ.

"ಸೈಫುಲ್ ಇಸ್ಲಾಂ ಅಲೀಫ್ ಚಿತ್ತಗಾಂಗ್‍ನಲ್ಲಿ ಮೃತಪಟ್ಟಿದ್ದಾರೆ" ಎಂದು ಚಿತ್ತಗಾಂಗ್ ವಕೀಲರ ಸಂಘದ ಅಧ್ಯಕ್ಷ ನಜೀಂ ಉದ್ದೀನ್ ಚೌಧರಿ ಎಎನ್‍ಐಗೆ ತಿಳಿಸಿದ್ದಾರೆ. ಈ ಹತ್ಯೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಅಲೀಫ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಹುಸೇನ್ ರಜಾಕ್ ವಿವರಿಸಿದ್ದಾರೆ.

"ಸದಸ್ಯರೊಬ್ಬರ ಹತ್ಯೆಯನ್ನು ಪ್ರತಿಭಟಿಸಿ ಬುಧವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಲು ಸಂಘ ನಿರ್ಧರಿಸಿದೆ" ಎಂದು ಅವರು ತಿಳಿಸಿದ್ದಾರೆ. ಚಿತ್ತಗಾಂಗ್ ಉದ್ವಿಗ್ನವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಚಿತ್ತಗಾಂಗ್ ಮತ್ತು ರಾಜಧಾನಿ ಢಾಕಾದಲ್ಲಿ ಹೆಚ್ಚುವರಿ ಭದ್ರತೆ ಆಯೋಜಿಸಲಾಗಿದೆ.

ಹಿಂದೂ ಧಾರ್ಮಿಕ ಮುಖಂಡ ಚಿನ್ಮಯ ಬ್ರಹ್ಮಚಾರಿ ಬಿಡುಗಡೆಗೆ ಆಗ್ರಹಿಸಿ ಸಾವಿರಾರು ಮಂದಿ ಚಿತ್ತಗಾಂಗ್ ನ್ಯಾಯಾಲಯದ ಆವರಣದಲ್ಲಿ ಸೇರಿ ಆಗ್ರಹಿಸಿದರು. ಚಿನ್ಮಯ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ಜೈಲು ವಾಹನವನ್ನು ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತೆ ಸೌಂಡ್ ಗ್ರೆನೇಡ್‍ಗಳನ್ನು ಸಿಡಿಸಿದರು. ಎರಡು ಗಂಟೆ ಸಂಘರ್ಷದ ಬಳಿಕ ಚಿನ್ಮಯ ಬ್ರಹ್ಮಚಾರಿಯನ್ನು ಜೈಲಿಗೆ ಕರೆದೊಯ್ಯಲಾಯಿತು.

ಬಾಂಗ್ಲಾದೇಶದ ರಾಷ್ಟ್ರೀಯ ಧ್ವಜಸ್ತಂಭದ ತುದಿಯಲ್ಲಿ ಧ್ವಜ ಹಾರಿಸಿದ ಆರೋಪದಲ್ಲಿ ಚಿನ್ಮಯ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಅದರೆ ಪ್ರಕರಣ ದಾಖಲಿಸಿದ ವ್ಯಕ್ತಿ ಇದೀಗ ಪ್ರಕರಣ ಮಂದುವರಿಸಲು ನಿರಾಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News