ಸಿಎಂ ಹುದ್ದೆಗೆ ಚುನಾವಣಾಪೂರ್ವ ಒಪ್ಪಂದ : ಶಿಂಧೆ ಬಣದ ನಾಯಕ

Update: 2024-11-27 03:45 GMT

ಏಕನಾಥ ಶಿಂದೆ, ಉದ್ಧವ್‌ ಠಾಕ್ರೆ | Photo : msn.com

ಮುಂಬೈ: ಮಹಾಯುತಿ ಕೂಟ 2024ರ ಚುನಾವಣೆಯಲ್ಲಿ ಬಹುಮತ ಗಳಿಸಿದರೆ, ಮುಖ್ಯಮಂತ್ರಿ ಹುದ್ದೆ ಸರದಿಯಂತೆ ಬದಲಾಗಬೇಕು ಎಂದು ಚುನಾವಣಾಪೂರ್ವ ಒಪ್ಪಂದವಾಗಿತ್ತು ಎಂದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಮುಖಂಡರೊಬ್ಬರು ಹೇಳಿಕೆ ನೀಡಿರುವುದು ಐದು ವರ್ಷದ ಹಿಂದೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನೆನಪನ್ನು ಮರುಕಳಿಸುವಂತೆ ಮಾಡಿದೆ. 2019ರ ಚುನಾವಣೆಯ ಬಳಿಕ ಉದ್ಧವ್ ಠಾಕ್ರೆ, ಬಿಜೆಪಿ ಜತೆ ಸರದಿಯ ಆಧಾರದಲ್ಲಿ ಸಿಎಂ ಹುದ್ದೆ ಹಂಚಿಕೊಳ್ಳುವ ಒಪ್ಪಂದವಾಗಿತ್ತು ಎಂದು ಹೇಳಿಕೆ ನೀಡಿದ್ದರು.

ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಆಪ್ತರಾಗಿರುವ ಹಿರಿಯ ಮುಖಂಡರೊಬ್ಬರು ಈ ಪ್ರತಿಪಾದನೆ ಮಾಡಿದ್ದು, ಮಹಾಯುತಿ ಕೂಟ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ, ಶಿಂಧೆ ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಬೇಕು ಎಂದು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಮಹಾಯುತಿ ಕೂಟ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ, ವಿಧಾನಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಸರಣಿ ಸಭೆಗಳು ನಡೆದಿದ್ದವು. "ಈ ಸಭೆಗಳಲ್ಲಿ, ಬಿಜೆಪಿ ಗರಿಷ್ಠ ಸಂಖ್ಯೆಯ ಸ್ಥಾನಗಳಲ್ಲಿ ಸ್ಪಧಿಸಬೇಕು ಮತ್ತು ಶಿವಸೇನೆ ಹಾಗೂ ಎನ್‍ಸಿಪಿಗೆ ನಂತರದ ಆದ್ಯತೆ ಎಂದು ನಿರ್ಧರಿಸಲಾಗಿತ್ತು. ಆದಾಗ್ಯೂ ಎಷ್ಟು ಸ್ಥಾನಗಳಲ್ಲಿ ಮಹಾಯುತಿ ಕೂಟ ಗೆದ್ದರೂ, ಸ್ಪಷ್ಟ ಬಹುಮತ ಲಭಿಸಿದಲ್ಲಿ ಶಿಂಧೆ ಸಿಎಂ ಆಗಿ ಮುಂದುವರಿಯಬೇಕು ಎಂದು ನಿರ್ಧರಿಸಲಾಗಿತ್ತು" ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಬಾರಿ 57 ಸ್ಥಾನಗಳನ್ನು ಗೆದ್ದಿರುವ ಶಿವಸೇನೆ, ಶಿಂಧೆ ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕು ಎಂಬ ಪ್ರಬಲ ಆಗ್ರಹ ಮುಂದುವರಿಸಿದ್ದು, ಬಿಜೆಪಿ ಈ ಹುದ್ದೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದೆ. ಆದರೆ 132 ಸ್ಥಾನಗಳನ್ನು ಹೊಂದಿರುವ ಬಿಜೆಪಿ, 288 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ ಕೇವಲ 12 ಸ್ಥಾನಗಳ ಕೊರತೆ ಹೊಂದಿದ್ದು, ದೇವೇಂದ್ರ ಫಡ್ನವೀಸ್ ಅವರೇ ಹೊಸ ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿದೆ.

ಶಿವಸೇನೆಯ ಅಭಿಪ್ರಾಯವನ್ನು ತಳ್ಳಿಹಾಕಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಧಾನಸಭಾ ಚುನಾವಣೆಯನ್ನು ಶಿಂಧೆ ನೇತೃತ್ವದಲ್ಲಿ ಎದುರಿಸಿದ್ದರು, ಸ್ಪಷ್ಟ ಬಹುಮತ ಪಡೆದಲ್ಲಿ ಹೊಸ ಮುಖ್ಯಮಂತ್ರಿಯನ್ನು ಬಿಜೆಪಿ ಸಂಸದೀಯ ಮಂಡಳಿ, ಶಿವಸೇನೆ ಮತ್ತು ಎನ್‍ಸಿಪಿ ಮುಖ್ಯಸ್ಥರು ನಿರ್ಧರಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News