ನಾಗಚೈತನ್ಯ-ಸಮಂತಾ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ
ಹೈದರಾಬಾದ್: ಟಾಲಿವುಡ್ ನ ಮಾಜಿ ದಂಪತಿಗಳಾದ ನಾಗಚೈತನ್ಯ ಮತ್ತು ಸಮಂತಾ ಋತು ಪ್ರಭು ಕುರಿತು ತಾವು ನೀಡಿದ್ದ ಹೇಳಿಕೆಗೆ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಕ್ಷಮೆ ಯಾಚಿಸಿದ್ದಾರೆ. ಆದರೆ, BRS ನಾಯಕ ಕೆ.ಟಿ.ರಾಮರಾವ್ ವಿರುದ್ಧ ತಾವು ಮಾಡಿದ್ದ ಆರೋಪಗಳನ್ನು ಸಮರ್ಥಿಸಿಕೊಂಡಿದ್ದಾರೆ.
BRS ನಾಯಕ ಕೆ.ಟಿ.ರಾಮರಾವ್ ನಟಿಯರ ಫೋನ್ ಗಳನ್ನು ಕದ್ದಾಲಿಸಿ, ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಸಚಿವೆ ಕೊಂಡಾ ಸುರೇಖಾ ಪುನರುಚ್ಚರಿಸಿದ್ದಾರೆ. “ನನ್ನ ಹೇಳಿಕೆಯು ಮಹಿಳೆಯರನ್ನು ತುಚ್ಛೀಕರಿಸುವ ನಾಯಕನನ್ನು ಪ್ರಶ್ನಿಸುವುದಾಗಿತ್ತೇ ಹೊರತು, ಸಮಂತಾ ಪ್ರಭು ಅವರನ್ನು ನೋಯಿಸುವುದಾಗಿರಲಿಲ್ಲ. ನೀವು ನಿಮ್ಮ ಸ್ವಂತ ಶಕ್ತಿಯಿಂದ ಬೆಳೆದು ಬಂದ ರೀತಿ ಕೇವಲ ನನ್ನ ಪಾಲಿಗೆ ಅಭಿಮಾನದ ಸಂಗತಿ ಮಾತ್ರವಲ್ಲ, ಬದಲಿಗೆ ಮಾದರಿ ಕೂಡಾ. ನನ್ನ ಹೇಳಿಕೆಯಿಂದ ನಿಮಗೆ ಮತ್ತು ನಿಮ್ಮ ಅಭಿಮಾನಿಗಳಿಗೆ ನೋವುಂಟಾಗಿದ್ದರೆ, ನಾನು ಬೇಷರತ್ತಾಗಿ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿಯಬೇಡಿ” ಎಂದು ಅವರು ವಿಷಾದಿಸಿದ್ದಾರೆ.
ಸಚಿವೆ ಕೊಂಡಾ ಸುರೇಖಾ ಹೇಳಿಕೆಯನ್ನು ನಾಗಚೈತನ್ಯ ಅವರ ತಂದೆ ಅಕ್ಕಿನೇನಿ ನಾಗಾರ್ಜುನ್, ನಾಗಚೈತನ್ಯ, ಸಮಂತಾ ಋತು ಪ್ರಭು, ಚಿರಂಜೀವಿ, ಜೂನಿಯರ್ NTR, ಅಲ್ಲು ಅರ್ಜುನ್ ಮತ್ತು ನಾನಿ ಬಲವಾಗಿ ಖಂಡಿಸಿದ್ದಾರೆ.
ಈ ನಡುವೆ, ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿರುವ ಸಚಿವೆ ಕೊಂಡಾ ಸುರೇಖಾ ಅವರಿಗೆ BRS ನಾಯಕ ಕೆ.ಟಿ.ರಾಮರಾವ್ ಮಾನಹಾನಿ ನೋಟಿಸ್ ರವಾನಿಸಿದ್ದಾರೆ. ಇದರೊಂದಿಗೆ, ಸಚಿವೆ ಕೊಂಡಾ ಸುರೇಖಾ ಅವರಿಗೆ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಕೊಡಿಸುವಂತೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ.