ಭಾರತವು ಧಾರ್ಮಿಕ ಸ್ವಾತಂತ್ರ್ಯದ ವ್ಯವಸ್ಥಿತ ಉಲ್ಲಂಘನೆಯಲ್ಲಿ ತೊಡಗಿದೆ: ಅಮೆರಿಕ ಆಯೋಗ

Update: 2024-10-03 11:16 GMT

PC : X 

ಹೊಸದಿಲ್ಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಡುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಸರಕಾರದ ಆಯೋಗವು, ಅದನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಘೋಷಿಸಲು ಕರೆ ನೀಡಿದೆ.

ಹಿರಿಯ ನೀತಿ ವಿಶ್ಲೇಷಕಿ ಸೆಮಾ ಹಸನ್ ಸಿದ್ಧಪಡಿಸಿರುವ ಯುಎಸ್ ಕಮಿಷನ್ ಫಾರ್ ಇಂಟರ್‌ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (ಯುಎಸ್‌ಸಿಐಆರ್‌ಎಫ್)ನ ವಾರ್ಷಿಕ ವರದಿಯಲ್ಲಿ ಭಾರತ ಕುರಿತು ಅಧ್ಯಾಯವು,ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಆರಾಧನಾ ಸ್ಥಳಗಳ ವಿರುದ್ಧ ಹಿಂಸಾತ್ಮಕ ದಾಳಿಗಳನ್ನು ಪ್ರಚೋದಿಸಲು ಸರಕಾರದ ನಾಯಕರಿಂದ ದ್ವೇಷ ಭಾಷಣ ಸೇರಿದಂತೆ ತಪ್ಪು ಮಾಹಿತಿಗಳ ಬಳಕೆಯನ್ನು ಬಣ್ಣಿಸಿದೆ.

ಯುಎಸ್‌ಸಿಐಆರ್‌ಎಫ್ ತನ್ನ ವಾರ್ಷಿಕ ವರದಿಯಲ್ಲಿ,ಧಾರ್ಮಿಕ ಸ್ವಾತಂತ್ರ್ಯದ ವ್ಯವಸ್ಥಿತ ಮತ್ತು ಅತಿರೇಕದ ಉಲ್ಲಂಘನೆಗಳಲ್ಲಿ ತೊಡಗಿರುವುದಕ್ಕಾಗಿ ಭಾರತವನ್ನು ‘ವಿಶೇಷ ಕಾಳಜಿಯ ದೇಶ’ ಎಂದು ಹೆಸರಿಸುವಂತೆ ಅಮೆರಿಕದ ವಿದೇಶಾಂಗ ಇಲಾಖೆಗೆ ಶಿಫಾರಸನ್ನೂ ಮಾಡಿದೆ. ಇಲಾಖೆಯು ಈವರೆಗೆ ಶಿಫಾರಸುಗಳನ್ನು ಅಂಗೀಕರಿಸಿಲ್ಲ.

ವರದಿಯು 2024ರಲ್ಲಿ ಸ್ವಘೋಷಿತ ಗೋರಕ್ಷಕ ಗುಂಪುಗಳಿಂದ ವ್ಯಕ್ತಿಗಳ ಮೇಲೆ ದಾಳಿ ಮತ್ತು ಥಳಿಸಿ ಹತ್ಯೆ, ಧಾರ್ಮಿಕ ನಾಯಕರ ನಿರಂಕುಶ ಬಂಧನಗಳು ಹಾಗೂ ಮನೆಗಳು ಮತ್ತು ಆರಾಧನಾ ಸ್ಥಳಗಳ ಧ್ವಂಸ ಇವುಗಳನ್ನು ಎತ್ತಿ ತೋರಿಸಿದೆ. ಈ ಘಟನೆಗಳು ನಿರ್ದಿಷ್ಟವಾಗಿ ಧಾರ್ಮಿಕ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಗಳಾಗಿವೆ ಎಂದು ಯುಎಸ್‌ಸಿಐಆರ್‌ಎಫ್ ಹೇಳಿದೆ.

ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಸರಕಾರದಿಂದ ಆರಂಭಗೊಂಡು ಭಾರತವು ತನ್ನ ಆಂತರಿಕ ವ್ಯವಹಾರಗಳಲ್ಲಿ ‘ಹಸ್ತಕ್ಷೇಪ’ವನ್ನು ಉಲ್ಲೇಖಿಸಿ ಯುಎಸ್‌ಸಿಐಆರ್‌ಎಫ್ ಸದಸ್ಯರಿಗೆ ದೇಶಕ್ಕೆ ಭೇಟಿ ನೀಡಲು ನಿರಂತರವಾಗಿ ವೀಸಾಗಳನ್ನು ನಿರಾಕರಿಸುತ್ತಲೇ ಬಂದಿದೆ ಎಂದು ಅದು ಹೇಳಿದೆ.

ದೇಶದ ಹೆಸರನ್ನು ಕೆಡಿಸಲು ಯುಎಸ್‌ಸಿಐಆರ್‌ಎಫ್ ಪಕ್ಷಪಾತದ,‌ ಅವೈಜ್ಞಾನಿಕ ಮತ್ತು ಅಜೆಂಡಾ ಪ್ರೇರಿತ ವರದಿಗಳನ್ನು ಮಾಡುತ್ತಿದೆ ಎಂದು ಈ ಹಿಂದೆ ಭಾರತ ಮತ್ತು ಅನೇಕ ಭಾರತೀಯ-ಅಮೆರಿಕನ್ ಗುಂಪುಗಳು ಆರೋಪಿಸಿದ್ದವು.

ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳಲು ಮತ್ತು ಅವರಿಗೆ ಹಕ್ಕುಗಳನ್ನು ನಿರಾಕರಿಸಲು ಪೌರತ್ವ ತಿದ್ದುಪಡಿ ಕಾಯ್ದೆ, ಏಕರೂಪ ನಾಗರಿಕ ಸಂಹಿತೆ ಹಾಗೂ ಹಲವಾರು ರಾಜ್ಯಗಳಲ್ಲಿ ಮತಾಂತರ ವಿರೋಧಿ ಮತ್ತು ಗೋಹತ್ಯೆ ನಿಷೇಧ ಕಾನೂನುಗಳು ಸೇರಿದಂತೆ ಭಾರತದ ಕಾನೂನು ಚೌಕಟ್ಟಿನಲ್ಲಿ ಬದಲಾವಣೆಗಳು ಮತ್ತು ಅನುಷ್ಠಾನಗಳನ್ನೂ ವರದಿಯು ವಿವರಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News