ಶಿವಸೇನೆ ನಾಯಕಿಯನ್ನು ನಿಂದಿಸಿದ ಆರೋಪ: ಶಿವಸೇನೆ ನಾಯಕ ಸಂಜಯ್ ರಾವತ್ ಸಹೋದರನ ವಿರುದ್ಧ ಪ್ರಕರಣ ದಾಖಲು
ಮುಂಬೈ: ಶಿವಸೇನೆ ನಾಯಕಿ ಸುವರ್ಣ ಕರಾಂಜೆಯನ್ನು ನಿಂದಿಸಿದ ಆರೋಪದಲ್ಲಿ ಶಿವಸೇನೆ (ಉದ್ಧವ್ ಬಣ) ಶಾಸಕ ಹಾಗೂ ಶಿವಸೇನೆ ನಾಯಕ ಸಂಜಯ್ ರಾವತ್ ಅವರ ಸಹೋದರ ಸುನೀಲ್ ರಾವತ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುನೀಲ್ ರಾವತ್ ಸ್ಪರ್ಧಿಸುತ್ತಿರುವ ಮುಂಬೈನ ವಿಖ್ರೋಲಿ ವಿಧಾನಸಭಾ ಕ್ಷೇತ್ರದಿಂದ ಸುವರ್ಣ ಕರಾಂಜೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದಾರೆ.
ಅಕ್ಟೋಬರ್ 27ರಂದು ವಿಖ್ರೋಲಿ ಉಪನಗರದ ಟ್ಯಾಗೋರ್ ನಗರ್ ಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಶಿವಸೇನೆ (ಉದ್ಧವ್ ಬಣ) ಅಭ್ಯರ್ಥಿ ಸುನೀಲ್ ರಾವತ್ ತಮ್ಮ ಪ್ರತಿಸ್ಪರ್ಧಿ ಸುವರ್ಣ ಕರಾಂಜೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಈ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಸುವರ್ಣ ಕರಾಂಜೆ ದಾಖಲಿರುವ ದೂರನ್ನು ಆಧರಿಸಿ ಸೋಮವಾರ ಮುಂಬೈ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79 (ಮಹಿಳೆಯ ಘನತೆಗೆ ಕುಂದುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವೆಂಬರ್ 20ರಂದು ಒಂದೇ ಹಂತದಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.