ಪ್ರಧಾನಿಯ ಭದ್ರತೆ ನೆಪದಲ್ಲಿ ಸಿಎಂ ಹೇಮಂತ್ ಸೊರೇನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಗೆ ಅಡ್ಡಿ: ಜೆಎಂಎಂ ಆರೋಪ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್ ರಾಜ್ಯಕ್ಕೆ ಭೇಟಿ ಹಿನ್ನೆಲೆಯಲ್ಲಿ ನವೆಂಬರ್ 4ರಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಮಾಡಲು ಒಂದೂವರೆ ಗಂಟೆಗಳ ಕಾಲ ಅಡ್ಡಿಪಡಿಸಲಾಯಿತು ಎಂದು ಆರೋಪಿಸಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಪಕ್ಷ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾರಾ ಪ್ರಚಾರಕರಿಗೆ ಸಮಾನ ಅವಕಾಶ ಒದಗಿಸಲು ಮಧ್ಯಪ್ರವೇಶಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಗರ್ವಾ ಹಾಗೂ ಚೈಬಾಸಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ನವೆಂಬರ್ 4ರಂದು ಈ ಭಾಗಗಳಲ್ಲಿ ಹಾರಾಟ ನಿಷೇಧವನ್ನು ಹೇರಲಾಗಿತ್ತು ಎಂದು ಆರೋಪಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜೆಎಂಎಂ ಪತ್ರ ಬರೆದಿದೆ.
“ನಮ್ಮ ತಾರಾ ಪ್ರಚಾರಕ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸಿಘ್ಭುಮ್ ನಲ್ಲಿನ ಗುದ್ರಿಯಲ್ಲಿ ಮಧ್ಯಾಹ್ನ 1.45ರ ವೇಳೆಗೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ನಂತರ, ಮಧ್ಯಾಹ್ನ 2.25ರ ವೇಳೆಗೆ ಸಿಮ್ಡೆಗಾದಲ್ಲಿನ ಬಝಾರ್ ತಾಂಡ್ ನಲ್ಲಿ ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳುವವರಿದ್ದರು” ಎಂದು ಪತ್ರದಲ್ಲಿ ಹೇಳಲಾಗಿದೆ.
“ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 2.40ರ ವೇಳೆಗೆ ಚೈಬಾಸದಲ್ಲಿರಬೇಕಿದೆ. ಗುದ್ರಿ ಮತ್ತು ಚೈಬಾಸ ನಡುವಿನ ಅಂತರ 80 ಕಿಮೀ ಆಗಿದ್ದರೆ, ಸಿಮ್ಡೆಗಾಗೆ 90 ಕಿಮೀ ಆಗಿದೆ. ಸೊರೇನ್ ಅವರ ಸಿಮ್ಡೆಗಾ ಭೇಟಿಗೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಆದರೆ, ಪ್ರಧಾನಿಯ ಭದ್ರತಾ ಶಿಷ್ಟಾಚಾರವನ್ನು ಮುಂದು ಮಾಡಿ, ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಹೆಲಿಕಾಪ್ಟರ್ ಹಾರಾಟವನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ತಡೆ ಹಿಡಿಯಲಾಗಿತ್ತು” ಎಂದೂ ಪತ್ರದಲ್ಲಿ ದೂಷಿಸಲಾಗಿದೆ.
ಸೋಮವಾರ ಈ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜೆಎಂಎಂ ವಕ್ತಾರ ಸುಪ್ರಿಯೊ ಭಟ್ಟಾಚಾರ್ಯ ರವಾನಿಸಿದ್ದಾರೆ.