ಬಿಹಾರ: ಅನರ್ಹತೆ, ನಕಲಿ ದಾಖಲೆಗಳ ಕಾರಣಕ್ಕೆ ಉದ್ಯೋಗ ಕಳೆದುಕೊಳ್ಳಲಿರುವ ಸಾವಿರಾರು ಶಾಲಾ ಶಿಕ್ಷಕರು
ಪಾಟ್ನಾ: ಸರಕಾರಿ ಶಾಲೆಗಳಿಗೆ ಬಿಹಾರ ಸರಕಾರವು ದೊಡ್ಡ ಪ್ರಮಾಣದ ನೇಮಕಾತಿ ಪ್ರಕ್ರಿಯೆಯನ್ನು ಕೈತ್ತಿಕೊಂಡಿದೆ. ಆದರೆ, ಬಿಹಾರ ನಾಗರಿಕ ಸೇವಾ ಆಯೋಗದ ಪ್ರಾಥಮಿಕ ಹಂತದ ನೇಮಕಾತಿ ಪ್ರಕ್ರಿಯೆಯಲ್ಲಿ ಒಳ ನುಸುಳುವಲ್ಲಿ ಯಶಸ್ವಿಯಾಗಿರುವ ಸಾವಿರಾರು ಅನರ್ಹರು ಹಾಗೂ ನಕಲಿ ದಾಖಲೆ ನೀಡಿರುವ ಅಭ್ಯರ್ಥಿಗಳು ತಮ್ಮ ಹುದ್ದೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಶೇ. 60ರಷ್ಟು ಅಂಕ ಗಳಿಸಲು ವಿಫಲವಾಗಿರುವ ಹೊರ ರಾಜ್ಯದ ದೊಡ್ಡ ಪ್ರಮಾಣದ ಅಭ್ಯರ್ಥಿಗಳು, ಶಿಕ್ಷಕರ ನೇಮಕಾತಿ ಪರೀಕ್ಷೆ 1 & 2ರಲ್ಲಿ ನೇಮಕವಾಗಿರುವ ಸಂಗತಿ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿರುವ ವರದಿಗಿಂತ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕೇವಲ ರಾಜ್ಯದ ನಿವಾಸಿಗಳು ಮಾತ್ರ ರಾಜ್ಯ ಮೀಸಲಾತಿ ಸೂತ್ರದ ಲಾಭ ಪಡೆಯಲಿದ್ದಾರೆಯೆ ಹೊರತು, ಇತರ ರಾಜ್ಯಗಳ ನಿವಾಸಿಗಳಲ್ಲ ಎಂದು ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ” ಎಂದು ಈ ಕುರಿತು ಸೋಮವಾರ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪಂಕಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿರುವ ಶೇ. 5ರಷ್ಟು ವಿನಾಯತಿಯ ಲಾಭಕ್ಕಾಗಿ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿರುವ ಕುಮಾರಿ ಚಾಂದನಿ ಎಂಬ ಶಿಕ್ಷಕಿಯ ಪ್ರಕರಣವನ್ನು ಉಲ್ಲೇಖಿಸಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.
ಈ ಸಂಬಂಧ ಮಾರ್ಚ್ 18ರಂದು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದ ಪಾಟ್ನಾ ಹೈಕೋರ್ಟ್, ಈ ವಿಷಯದ ಕುರಿತು ಶಿಕ್ಷಕಿಯ ಅಭಿಪ್ರಾಯವನ್ನು ಆಲಿಸುವಂತೆ ಆದೇಶಿಸಿತ್ತು. ಸಕಾರಣದ ಆಧಾರದಲ್ಲಿ ಶಿಕ್ಷಕಿ ಕುಮಾರಿ ಚಾಂದನಿಯ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ಕುಮಾರಿ ಚಾಂದನಿ ಉತ್ತರ ಪ್ರದೇಶದ ನಿವಾಸಿಯಾಗಿರುವುದರಿಂದ, ಅವರು ಶೇ. 5ರ ವಿನಾಯತಿ ಪಡೆಯಲು ಅರ್ಹರಲ್ಲ ಎಂದು ತೀರ್ಪು ನೀಡಿತ್ತು.