ನೀವೆಂದಿಗೂ ನನ್ನ ಅಧ್ಯಕ್ಷರಾಗಲು ಸಾಧ್ಯವಿಲ್ಲ : ಡೊನಾಲ್ಡ್ ಟ್ರಂಪ್ ರ ಸ್ವಯಂಚಾಲಿತ ಸಂದೇಶಕ್ಕೆ ಭಾರತೀಯ ನೀಡಿದ ಪ್ರತಿಕ್ರಿಯೆ ವೈರಲ್
ಹೊಸದಿಲ್ಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ತಾರಕಕ್ಕೇರಿದ್ದು, ಡೊನಾಲ್ಡ್ ಟ್ರಂಪ್ ಅವರ ಸ್ವಯಂಚಾಲಿತ ಸಂದೇಶಗಳು ಅಮೆರಿಕ ಗಡಿಯಾಚೆಗೂ ಸದ್ದು ಮಾಡುತ್ತಿವೆ. “ನಾನು ಉತ್ತರ ಕೆರೊಲಿನಾದಿಂದ ನಿಮಗೆ ಬಹು ಮುಖ್ಯ ಚುನಾವಣಾ ಮಾಹಿತಿ ರವಾನಿಸುತ್ತೇನೆ. ನವೆಂಬರ್ 5ರಂದು ನೀವು ಡೊನಾಲ್ಡ್ ಜೆ. ಟ್ರಂಪ್ ಗೆ ಮತ ನೀಡಲು ಸಿದ್ಧರಾಗಿದ್ದೀರಿ ಎಂಬುದನ್ನು ಖಾತರಿಪಡಿಸಿಕೊಳ್ಳಿ” ಎಂಬ ಸ್ವಯಂಚಾಲಿತ ಸಂದೇಶವೊಂದು ಭಾರತೀಯ ಬಳಕೆದಾರರೊಬ್ಬರಿಗೂ ತಲುಪಿದೆ.
ಈ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಬಳಕೆದಾರ ರೋಷನ್ ರಾಯ್, “ನೀವಾಗಲಿ ಅಥವಾ ಕಮಲಾ ಹ್ಯಾರಿಸ್ ಆಗಲಿ ನನಗೆ ಅಧ್ಯಕ್ಷರಾಗಲು ಎಂದಿಗೂ ಸಾಧ್ಯವಿಲ್ಲ. ಯಾಕೆಂದರೆ, ನಾನು ಭಾರತದವನು” ಎಂದು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
ರೋಷನ್ ರಾಯ್ ನೀಡಿರುವ ಈ ಪ್ರತಿಕ್ರಿಯೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸೆಳೆದಿದೆ. ಇದು ಡೊನಾಲ್ಡ್ ಟ್ರಂಪ್ ಅವರ ಸಂದೇಶವು ಅನಿರೀಕ್ಷಿತವಾಗಿ ಹೇಗೆ ಅಮೆರಿಕದ ಗಡಿಯನ್ನೂ ದಾಟಿ ತಲುಪುತ್ತಿದೆ ಎಂಬ ಕುತೂಹಲ ಕೆರಳಿಸಿದೆ. ಆ ಮೂಲಕ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ಸಂದೇಶಗಳ ತಂತ್ರಗಾರಿಕೆ ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ಚರ್ಚೆಗೆ ನಾಂದಿ ಹಾಡಿದೆ. 2015ರಿಂದಲೂ ಡೊನಾಲ್ಡ್ ಟ್ರಂಪ್ ಇಂತಹುದೇ ಚುನಾವಣಾ ತಂತ್ರಗಾರಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಬಳಕೆದಾರರನ್ನು ತಲುಪುತ್ತಿರುವ ಇಂತಹ ಸಂದೇಶಗಳ ಬಗ್ಗೆ ಎಕ್ಸ್ ವಿನಿಮಯ ಕೇಂದ್ರವು ಪ್ರಶ್ನೆಯನ್ನೆತ್ತಿದೆ. 2018ರಲ್ಲಿ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ನಡೆಸಿದ್ದ ಅಧ್ಯಯನದ ಪ್ರಕಾರ, 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಾಟ್ ಗಳು ಮಹತ್ವದ ಪಾತ್ರ ನಿರ್ವಹಿಸಿದ್ದವು. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ವಿಟರ್ ಬಾಟ್ ಗಳು ಡೊನಾಲ್ಡ್ ಟ್ರಂಪ್ ಅವರ ಮತ ಗಳಿಕೆಯ ಪ್ರಮಾಣವನ್ನು ಶೇ. 3.23ರಷ್ಟು ಹೆಚ್ಚಳ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.