ಚುನಾವಣಾ ಬಾಂಡ್ ಬಗ್ಗೆ ಶಾಖೆಗಳಿಗೆ ನೀಡಿದ್ದ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಲು ನಿರಾಕರಿಸಿದ ಎಸ್‌ಬಿಐ
Update: 2024-04-02 09:51 GMT
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ತರಾಟೆಯ ನಂತರ ಚುನಾವಣಾ ಬಾಂಡ್ ಮಾಹಿತಿಯನ್ನು ಬಹಿರಂಗಪಡಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದೇ ಸಮಯ ಆರ್‌ಟಿಐ ಮೂಲಕ ಕೋರಲಾದ ಪ್ರಮಾಣಿತ ಕಾರ್ಯನಿರ್ವಹಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಲು ನಿರಾಕರಿಸಿದೆ. ಇದೀಗ ರದ್ದಾಗಿರುವ ಚುನಾವಣಾ ಬಾಂಡ್ ಯೋಜನೆಯಡಿ ಬಾಂಡ್‌ಗಳ ಮಾರಾಟ ಮತ್ತು ನಗದೀಕರಣ ಕುರಿತಂತೆ ಬ್ಯಾಂಕ್ ತನ್ನ ಶಾಖೆಗಳಿಗೆ ಪ್ರಮಾಣಿತ ಕಾರ್ಯನಿರ್ವಹಣಾ ಪ್ರಕ್ರಿಯೆ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್- ಎಸ್‌ಒಪಿ) ಬಗ್ಗೆ ಸೂಚನೆಗೆ ಸಂಬಂಧಿಸಿದತೆ ಮಾಹಿತಿ ಒದಗಿಸಿಲ್ಲ.
ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಈ ಕುರಿತು ಮಾಹಿತಿ ಕೋರಿದ್ದರು. ಆದರೆ ಈ ಎಸ್‌ಒಪಿಗಳು ಆಂತರಿಕ ಮಾರ್ಗಸೂಚಿಗಳಾಗಿವೆ ಹಾಗೂ ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಡಿ) ಅನ್ವಯ ಬಹಿರಂಗಪಡಿಸುವುದರಿಂದ ವಿನಾಯಿತಿ ಹೊಂದಿವೆ ಎಂದು ಎಸ್‌ಬಿಐ ಡೆಪ್ಯುಟಿ ಜನರಲ್ ಮ್ಯಾನೇಜರ್ ಎಂ ಕಣ್ಣ ಬಾಬು ತಮ್ಮ ಉತ್ತರದಲ್ಲಿ ಹೇಳಿದ್ದಾರೆ.