ನ್ಯಾಯಾಂಗ ಅಶಿಸ್ತು: ಪಂಜಾಬ್ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಸುಪ್ರೀಂ ಅಸಮಾಧಾನ
ಹೊಸದಿಲ್ಲಿ: ಸುಪ್ರೀಂಕೋರ್ಟ್ ತೀರ್ಪನ್ನು ಕಡೆಗಣಿಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಾಧೀಶ ರಾಜ್‍ಬೀರ್ ಶೇರಾವತ್ ಅವರ ವಿರುದ್ಧ ಕ್ರಮಕ್ಕೆ ಸುಪ್ರೀಂಕೋರ್ಟ್ ಮುಂದಾಗಿದ್ದು, ಈ "ನ್ಯಾಯಾಂಗ ಅವಿಧೇಯತೆ"ಯನ್ನು ಗಂಭೀರವಾಗಿ ಪರಿಗಣಿಸಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಭವಿಷ್ಯ ನಿರ್ಧರಿಸಲು ಸಿಜೆಐ ಡಿ.ವೈ.ಚಂದ್ರಚೂಡ್ ಹಾಗೂ ಇತರ ನಾಲ್ಕು ಮಂದಿ ಹಿರಿಯ ನ್ಯಾಯಮೂರ್ತಿಗಳು ಬುಧವಾರ ವಿಶೇಷ ಪೀಠ ಸ್ಥಾಪನೆಗೆ ನಿರ್ಧರಿಸಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಜುಲೈ 17ರಂದು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ನ್ಯಾಯಮೂರ್ತಿ ಶೆರಾವತ್ ತಮ್ಮ ತೀರ್ಪಿನಲ್ಲಿ, "ಸುಪ್ರೀಂಕೋರ್ಟ್ ವಾಸ್ತವವಾಗಿ ಮತ್ತು ಸಂವಿಧಾನಾತ್ಮಕವಾಗಿ ಎಷ್ಟು ಉನ್ನತವೋ ಅದಕ್ಕಿಂತ ಹೆಚ್ಚಾಗಿ ಸರ್ವೋಚ್ಛ ಎನ್ನುವ ಹಾಗೂ ಹೈಕೋರ್ಟ್ ಎಷ್ಟು ಉನ್ನತವೋ ಅದಕ್ಕಿಂತ ಕಡಿಮೆ ಮಹತ್ವದ್ದು ಎಂಬ ಪ್ರವೃತ್ತಿ ಬೆಳೆಯುತ್ತಿದೆ" ಎಂದು ಹೇಳಿದ್ದರು.
ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಶೇರಾವತ್ ಅವರ ಆದೇಶವನ್ನು ನಿಭಾಯಿಸಲಿದೆ. ಸುಪ್ರೀಂಕೋರ್ಟ್‍ನ ತಡೆಯಾಜ್ಞೆ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಅವರು ಮುಂದೂಡಿದ್ದರು.
ಕೆಲ ಶಾಸನಾತ್ಮಕ ಕಾರಣಗಳಿಂದಾಗಿ ಪ್ರತಿ ಬಾರಿಯೂ ಸುಪ್ರೀಂಕೋರ್ಟ್ ಆದೇಶದಂತೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಮುಂದೂಡಲು ಸಾಧ್ಯವಾಗದು. ಇದು ದುರದೃಷ್ಟಕರ ಘಟನೆ ಹಾಗೂ ಇದನ್ನು ತಪ್ಪಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದರು.
ಹೈಕೋರ್ಟ್‍ನಲ್ಲಿ ಏಕಸದಸ್ಯಪೀಠ ಆರಂಭಿಸಿದ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಹೈಕೋರ್ಟ್‍ನ ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಬೇಕು. ವಿಭಾಗೀಯ ಪೀಠ ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದಾಗ ಮಾತ್ರ ಸುಪ್ರೀಂಕೋರ್ಟ್ ಪಾತ್ರ ವಹಿಸಬೇಕಾಗುತ್ತದೆ. ಆಗ ಮಾತ್ರ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಬಹುದಾಗಿದೆ. ಸುಪ್ರೀಂಕೋರ್ಟ್ ನಮ್ಮ ವ್ಯಾಪ್ತಿಯ ಮೇಲೆ ಸವಾರಿ ಮಾಡುತ್ತಿದೆ ಎನ್ನುವುದು ಪ್ರಾಥಮಿಕ ಸತ್ಯಾಂಶ ಎಂದು ಹೇಳಿದ್ದರು.