ಪರಿಶಿಷ್ಟ ಒಳಮೀಸಲಾತಿ | ಸುಪ್ರೀಂ ತೀರ್ಪನ್ನು ಪ್ರಶ್ನಿಸಲು ಎಲ್‌ಜೆಪಿ ನಿರ್ಧಾರ : ಕೇಂದ್ರ ಸಚಿವ ಚಿರಾಗ್ ಪಾಸ್ವಾನ್

Update: 2024-08-03 16:33 GMT

 ಚಿರಾಗ್ ಪಾಸ್ವಾನ್  |  PC : PTI 


ಹೊಸದಿಲ್ಲಿ : ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿಗೆ ಅವಕಾಶ ನೀಡುವ ಸುಪ್ರೀಂಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ)ವು ಮನವಿ ಸಲ್ಲಿಸಲಿದೆ ಎಂದು ಆ ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ

ಹೊಸದಿಲ್ಲಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶೇ.15ರಷ್ಟು ಪರಿಶಿಷ್ಟ ಖೋಟಾದಲ್ಲಿ ಒಳಮೀಸಲಾತಿಯನ್ನು ಕಲ್ಪಿಸುವುದರಿಂದ ಸಾಮಾಜಿಕವಾಗಿ ಅವಗಣಿಸಲ್ಪಟ್ಟ ವರ್ಗವನ್ನು ಮೇಲೆತ್ತುವ ಉದ್ದೇಶವು ಈಡೇರಲಾರದು ಎಂದರು. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಅಸ್ಪೃಶ್ಯತೆ ಎಂಬ ಪದವು ಉಲ್ಲೇಖ ಕೂಡಾ ಇರದಿರುವುದು ಆಶ್ಚರ್ಯಕರವೆಂದು ಅವರು ಹೇಳಿದರು

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟಪಂಗಡಗಳ ಹಲವಾರು ಪ್ರಮುಖ ವ್ಯಕ್ತಿಗಳು ಆರ್ಥಿಕ ಹಾಗೂ ವೃತ್ತಿಪರ ಮಟ್ಟದಲ್ಲಿ ನಿರ್ದಿಷ್ಟ ಸಾಧನೆಯನ್ನು ಮಾಡಿರುವ ಹೊರತಾಗಿಯೂ ಅವರು ಅಸ್ಪೃಶ್ಯತೆಗೆ ಗುರಿಯಾಗಿದ್ದಾರೆ ಎಂದರು.

‘‘ತಾರತಮ್ಯವೆನ್ನುವುದು ನೀವು ಆರ್ಥಿಕವಾಗಿ ಎಷ್ಟು ಉತ್ತಮವಾಗಿದ್ದೀರಿ ಅಥವಾ ನಿಮ್ಮ ಕ್ಷೇತ್ರದಲ್ಲಿ ಎಷ್ಟು ಯಶಸ್ವಿಯಾಗಿದ್ದೀರಿ ಎಂಬುದನ್ನು ಆಧರಿಸಿಲ್ಲ. ಅಸ್ಪೃಶ್ಯತೆಯಲ್ಲಿ ನಂಬಿಕೆಯಿರಿಸಿರುವ ಹಾಗೂ ಅದನ್ನು ಆಚರಿಸುತ್ತಿರುವ ವ್ಯಕ್ತಿಗಳು ಈಗಲೂ ಇರುವುದರಿಂದ ಅದು ಇನ್ನೂ ನಡೆಯುತ್ತಲೇ ಇದೆ’’ ಎಂದು ಕೇಂದ್ರ ಆಹಾರ ಸಂಸ್ಕರಣೆ ಕೈಗಾರಿಕೆ ಸಚಿವರಾದ ಚಿರಾಗ್ ಪಾಸ್ವಾನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News