ಅ.1ರಿಂದ ಜಾರಿಗೊಳ್ಳಲಿರುವ ಏಳು ಪ್ರಮುಖ ಹಣಕಾಸು ನಿಯಮಗಳು; ಮಾಹಿತಿ ಇಲ್ಲಿದೆ...

Update: 2024-09-23 12:04 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಅ.1ರಿಂದ ವೈಯಕ್ತಿಕ ಹಣಕಾಸಿನಲ್ಲಿ ಹಲವಾರು ಪ್ರಮುಖ ಬದಲಾವಣೆಗಳು ಆಗಲಿವೆ.

ಆಧಾರ್ ಕಾರ್ಡ್: 2024,ಅ.1ರಿಂದ ಶಾಶ್ವತ ಖಾತೆ ಸಂಖ್ಯೆ (ಪಾನ್)ಗಾಗಿ ಅರ್ಜಿ ಸಲ್ಲಿಸುವಾಗ ಅಥವಾ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವಾಗ ವ್ಯಕ್ತಿಗಳು ತಮ್ಮ ಆಧಾರ್ ನೋಂದಣಿ ಐಡಿಯನ್ನು ಬಳಸಲು ಅವಕಾಶವಿರುವುದಿಲ್ಲ.

ಬೋನಸ್ ಶೇರುಗಳು: ಸೆಬಿ ಬೋನಸ್ ಶೇರುಗಳ ಮಾರಾಟಗಳನ್ನು ಸುಗಮಗೊಳಿಸಲು ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಅ.1ರಿಂದ ಬೋನಸ್ ಶೇರುಗಳು ಟಿ-2 ಟ್ರೇಡಿಂಗ್‌ಗೆ ಅರ್ಹವಾಗಿರುತ್ತವೆ. ಇದು ಅವುಗಳ ರೆಕಾರ್ಡ್ ದಿನಾಂಕ ಮತ್ತು ಅವುಗಳ ಜಮೆ ಮತ್ತು ಮಾರಾಟದ ನಡುವಿನ ಸಮಯವನ್ನು ಕಡಿಮೆಗೊಳಿಸುತ್ತದೆ.

► ಸಣ್ಣ ಉಳಿತಾಯ ಯೋಜನೆಗಳು: ಅಂಚೆಕಚೇರಿಗಳ ಮೂಲಕ ರಾಷ್ಟ್ರೀಯ ಸಣ್ಣ ಉಳಿತಾಯ(ಎನ್‌ಎಸ್‌ಎಸ್) ಯೋಜನೆಗಳಡಿ ಅಸರ್ಮಪಕವಾಗಿ ತೆರೆಯಲಾಗಿರುವ ಖಾತೆಗಳನ್ನು ಕ್ರಮಬದ್ಧಗೊಳಿಸಲು ಮಾರ್ಗಸೂಚಿಗಳನ್ನು ವಿತ್ತ ಸಚಿವಾಲಯದ ಹಣಕಾಸು ವ್ಯವಹಾರಗಳ ಇಲಾಖೆಯು ಹೊರಡಿಸಿದೆ. ಇಂತಹ ಅಸಮರ್ಪಕ ಖಾತೆಗಳನ್ನು ಕ್ರಮಬದ್ಧಗೊಳಿಸಲು ಸಚಿವಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಅನಿಯಮಿತ ಎನ್‌ಎಸ್‌ಎಸ್ ಖಾತೆಗಳು,ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ತೆರೆಯಲಾದ ಪಿಪಿಎಫ್ ಖಾತೆಗಳು,ಬಹು ಪಿಪಿಎಫ್ ಖಾತೆಗಳು,ಎನ್ನಾರೈಗಳಿಂದ ಪಿಪಿಎಫ್ ಖಾತೆ ವಿಸ್ತರಣೆ ಹಾಗೂ ಹೆತ್ತವರ ಬದಲು ಅಜ್ಜ-ಅಜ್ಜಿಯರಿಂದ ತೆರೆಯಲಾದ ಸುಕನ್ಯಾ ಸಮೃದ್ಧಿ ಯೋಜನೆಗಳು ಸೇರಿದಂತೆ ಆರು ಪ್ರಮುಖ ವರ್ಗಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.

► ಸೆಕ್ಯೂರಿಟಿಸ್ ಟ್ರಾನ್ಸ್ಯಾಕ್ಷನ್ ಟ್ಯಾಕ್ಸ್(ಎಸ್‌ಟಿಟಿ): ಅ.1ರಿಂದ ಫ್ಯೂಚರ್ಸ್ ಮತ್ತು ಆಪ್ಶನ್ಸ್ (ಎಫ್ ಎನ್ ಒ) ಟ್ರೇಡಿಂಗ್ ಮೇಲಿನ ಎಸ್‌ಟಿಟಿ ಹೆಚ್ಚಲಿದೆ. ಆಪ್ಶನ್ಸ್ ಸೇಲ್‌ಗಳ ಮೇಲಿನ ಎಸ್‌ಟಿಟಿ ಪ್ರೀಮಿಯಮ್‌ನ ಶೇ.0.0625ರಿಂದ ಶೇ.0.1ಕ್ಕೆ ಏರಲಿದೆ. ಉದಾಹರಣೆಗೆ ನೀವು 100 ರೂ.ಪ್ರೀಮಿಯನ್‌ನ ಆಪ್ಶನ್ ಮಾರಾಟ ಮಾಡಿದರೆ 0.0625 ರೂ.ಬದಲಿಗೆ 0.10 ರೂ.ಪಾವತಿಸಬೇಕಾಗುತ್ತದೆ.

► ಭಾರತೀಯ ರೈಲ್ವೆಯ ವಿಶೇಷ ಅಭಿಯಾನ: ಜನದಟ್ಟಣೆಯ ವಾರಗಳಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ನಿರೀಕ್ಷಿತ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯು ಟಿಕೆಟ್‌ರಹಿತ ಪ್ರಯಾಣಿಕರ ವಿರುದ್ಧ ವಿಶೇಷ ಅಭಿಯಾನವನ್ನು ಆರಂಭಿಸಲಿದೆ.

► ಅಂಚೆ ಕಚೇರಿ ಖಾತೆಗಳ ಬಡ್ಡಿ ಬದಲಾವಣೆ: ಅ.1ರಿಂದ ಎನ್‌ಎಸ್‌ಎಸ್ ಯೋಜನೆಗಳಡಿ ಅಂಚೆ ಕಚೇರಿಯ ಸಣ್ಣ ಉಳಿತಾಯ ಖಾತೆಗಳಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ತಮ್ಮ ಉಳಿತಾಯಗಳ ಮೇಲೆ ಗಳಿಸುವ ಬಡ್ಡಿಯ ಮೇಲೆ ಪರಿಣಾಮ ಬೀರುವುದರಿಂದ ಖಾತೆದಾರರು ಈ ಬಗ್ಗೆ ತಿಳಿದುಕೊಂಡಿರಬೇಕು.

► ನೇರ ತೆರಿಗೆ ವಿವಾದ ಸೆ ವಿಶ್ವಾಸ ಯೋಜನೆ 2024: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ನೇರ ತೆರಿಗೆ ವಿವಾದ ಸೆ ವಿಶ್ವಾಸ ಯೋಜನೆ 2024 ಅ.1ರಿಂದ ಜಾರಿಗೊಳ್ಳಲಿದೆ ಎಂದು ಪ್ರಕಟಿಸಿದೆ. ಇದು 2024,ಜು.22ಕ್ಕೆ ಇದ್ದಂತೆ ಸರ್ವೋಚ್ಚ ನ್ಯಾಯಾಲಯ,ಉಚ್ಚ ನ್ಯಾಯಾಲಯಗಳು ಮತ್ತು ಇತರ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ಬಾಕಿಯಿರುವ ಮೇಲ್ಮನವಿಗಳು ಮತ್ತು ಅರ್ಜಿಗಳು ಸೇರಿದಂತೆ ಅಸ್ತಿತ್ವದಲ್ಲಿರುವ ವಿವಾದಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ತೆರಿಗೆದಾರರಿಗೆ ಅವಕಾಶ ನೀಡುವ ಮೂಲಕ ಆದಾಯ ತೆರಿಗೆ ದಾವೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News