EY ಉದ್ಯೋಗಿ ಸಾವು: ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಕಲಿಸುವಂತೆ ನಿರ್ಮಲಾ ಸೀತಾರಾಮನ್ ಕರೆ
ಚೆನ್ನೈ: ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಪಾಠಗಳನ್ನು ಬೋಧಿಸುವಂತೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಲೇಜುಗಳು ಮತ್ತು ವಿವಿಗಳಿಗೆ ಕರೆ ನೀಡಿದ್ದಾರೆ. ಇದು ವಿದ್ಯಾರ್ಥಿಗಳ ಆಂತರಿಕ ಬಲವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪುಣೆಯ ಅರ್ನಸ್ಟ್ ಆ್ಯಂಡ್ ಯಂಗ್ (EY) ಕಂಪನಿಯ ಲೆಕ್ಕ ಪರಿಶೋಧಕಿ ಅನ್ನಾ ಸೆಬಾಸ್ಟಿನ್ ಪೆರಾಯಿಲ್(26) ಅವರ ಸಾವಿನ ಹಿನ್ನೆಲೆಯಲ್ಲಿ ಸೀತಾರಾಮನ್ ಅವರ ಈ ಹೇಳಿಕೆ ಹೊರಬಿದ್ದಿದೆ. 2023ರಲ್ಲಿ ಸಿಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಅನ್ನಾ ನಾಲ್ಕು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು.
ಕೆಲಸದ ಒತ್ತಡ ಮತ್ತು ದೀರ್ಘ ಕೆಲಸದ ಅವಧಿಯು ತನ್ನ ಪುತ್ರಿಯ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಿತ್ತು ಮತ್ತು ಅಂತಿಮವಾಗಿ ಆಕೆಯ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಅನ್ನಾರ ತಾಯಿ EY ಇಂಡಿಯಾದ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.
ರವಿವಾರ ಇಲ್ಲಿಯ ಖಾಸಗಿ ವೈದ್ಯಕೀಯ ಕಾಲೇಜೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸೀತಾರಾಮನ್ ಮೃತರನ್ನು ಅಥವಾ ಕಂಪನಿಯನ್ನು ಹೆಸರಿಸದೆ ಅನ್ನಾರ ಸಾವಿನ ಬಗ್ಗೆ ಪ್ರಸ್ತಾವಿಸಿದರು.
‘ನಮ್ಮ ಮಕ್ಕಳು ಕಾಲೇಜು ಮತ್ತು ವಿವಿಗಳಲ್ಲಿ ಓದುತ್ತಾರೆ ಹಾಗೂ ಉತ್ತಮ ಅಂಕಗಳೊಂದಿಗೆ ಹೊರಬೀಳುತ್ತಾರೆ. ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ ಕೆಲಸದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ನಾವು ಈ ಸುದ್ದಿಯನ್ನು ಓದಿದ್ದೇವೆ ಮತ್ತು ಚರ್ಚಿಸಿದ್ದೇವೆ ’ಎಂದು ಹೇಳಿದ ಸೀತಾರಾಮನ್,ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಕ್ಯಾಂಪಸ್ ನೇಮಕಾತಿಗಳ ಮೂಲಕ ಅವರಿಗೆ ಉದ್ಯೋಗಗಳನ್ನು ಖಾತ್ರಿಪಡಿಸಿದರೂ,ಅವುಗಳ ಜೊತೆ ಕುಟುಂಬದಲ್ಲಿ ಕಲಿಸುವ ಇತರ ಕೆಲವು ವಿಷಯಗಳನ್ನೂ ಅವರಿಗೆ ಬೋಧಿಸಬೇಕು. ನೀವು ಏನೇ ಕಲಿಯುತ್ತಿದ್ದರೂ,ಏನೇ ಉದ್ಯೋಗ ಮಾಡುತ್ತಿದ್ದರೂ ಆ ಒತ್ತಡವನ್ನು ನಿಭಾಯಿಸಲು ನೀವು ಆಂತರಿಕ ಬಲವನ್ನು ಹೊಂದಿರಬೇಕು ಮತ್ತು ಇದನ್ನು ದೈವತ್ವದ ಮೂಲಕ ಮಾತ್ರ ಸಾಧಿಸಬಹುದು ಎನ್ನುವುದನ್ನು ಕುಟುಂಬಗಳು ಕಲಿಸಬೇಕು ಎಂದರು.
‘ದೇವರಲ್ಲಿ ನಂಬಿಕೆಯಿಡಿ, ನಮಗೆ ದೇವರ ಅನುಗ್ರಹ ಅಗತ್ಯವಿದೆ. ದೇವರನ್ನು ಪ್ರಾರ್ಥಿಸಿ,ಒಳ್ಳೆಯ ಶಿಸ್ತನ್ನು ಕಲಿಯಿರಿ. ಇದರಿಂದ ಮಾತ್ರ ನಿಮ್ಮ ಆತ್ಮಶಕ್ತಿ ಹೆಚ್ಚುತ್ತದೆ,ಆತ್ಮಶಕ್ತಿ ಹೆಚ್ಚಾದಾಗ ಮಾತ್ರ ಆಂತರಿಕ ಬಲ ಬರುತ್ತದೆ’ ಎಂದು ಹೇಳಿದ ಸೀತಾರಾಮನ್, ಶಿಕ್ಷಣ ಸಂಸ್ಥೆಗಳು ತಮ್ಮ ಬೋಧನೆಗಳಲ್ಲಿ ದೈವತ್ವ ಮತ್ತು ಆಧ್ಯಾತ್ಮಿಕತೆಯನ್ನು ತರಬೇಕು,ಆಗ ಮಾತ್ರ ಮಕ್ಕಳು ಆಂತರಿಕ ಬಲವನ್ನು ಪಡೆಯುತ್ತಾರೆ ಎಂದರು.
ಮಹಿಳೆಯ ಸಾವಿನ ವಿಷಯವನ್ನು ಕೇಂದ್ರ ಸರಕಾರವು ಕೈಗೆತ್ತಿಕೊಂಡಿದೆ ಮತ್ತು ಲೆಕ್ಕ ಪರಿಶೋಧಕ ಸಂಸ್ಥೆಯಲ್ಲಿನ ಕೆಲಸದ ವಾತಾವರಣ ಕುರಿತು ತನಿಖೆ ನಡೆಸಲಿದೆ ಎಂದರು.
ಕಾಂಗ್ರೆಸ್ ತಿರುಗೇಟು
ಸೀತಾರಾಮನ್ ವಿರುದ್ಧ ದಾಳಿ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು, ಸಚಿವೆಯ ಹೇಳಿಕೆಗಳನ್ನು ‘ಅತ್ಯಂತ ಕ್ರೂರ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬಣ್ಣಿಸಿದ್ದಾರೆ, ಸಚಿವೆ ಬಲಿಪಶುವನ್ನು ದೂಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸರಕಾರ ಮತ್ತು ಸೀತಾರಾಮನ್ ಅದಾನಿ ಮತ್ತು ಅಂಬಾನಿಯಂತಹ ದೈತ್ಯ ಉದ್ಯಮಿಗಳ ನೋವನ್ನು ಮಾತ್ರ ನೋಡಬಲ್ಲರು ಎಂದಿರುವ ವೇಣುಗೋಪಾಲ್, ಕಠಿಣವಾಗಿ ಶ್ರಮಿಸುತ್ತಿರುವ ಯುವ ಜನಾಂಗದ ನೋವನ್ನು ನೋಡುವಲ್ಲಿ ಪ್ರಸ್ತುತ ಸರಕಾರವು ಅಸಮರ್ಥವಾಗಿದೆ. ಐತಿಹಾಸಿಕ ನಿರುದ್ಯೋಗತನದ ಈ ಯುಗದಲ್ಲಿ ಉದ್ಯೋಗವನ್ನು ಪಡೆಯಲು ಯಶಸ್ವಿಯಾದರೂ ದುರಾಸೆಯಿಂದ ತುಂಬಿದ ಕಾರ್ಪೊರೇಟ್ ವ್ಯವಸ್ಥೆಯಿಂದ ಅನ್ನಾರಂತಹ ಫ್ರೆಷರ್‌ಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಅನ್ನಾ ತನ್ನ ಮನೆಯಲ್ಲಿ ಒತ್ತಡ ನಿರ್ವಹಣೆಯನ್ನು ಕಲಿತುಕೊಳ್ಳಬೇಕಿತ್ತು ಎಂದು ಹೇಳುವ ಮೂಲಕ ಸಿತಾರಾಮನ್ ಆಕೆಯನ್ನು ಮತ್ತು ಆಕೆಯ ಕುಟುಂಬವನ್ನು ದೂಷಿಸಿರುವುದು ಅತ್ಯಂತ ಕ್ರೂರವಾಗಿದೆ. ಬಲಿಪಶುವನ್ನು ಹೀಗೆ ದೂಷಿಸುದು ಅತ್ಯಂತ ಹೇಯವಾಗಿದೆ ಮತ್ತು ಇಂತಹ ಹೇಳಿಕೆಗಳಿಂದಾಗಿ ಉಂಟಾಗುವ ಸಿಟ್ಟು ಮತ್ತು ಅಸಹ್ಯವನ್ನು ಯಾವುದೇ ಪದಗಳು ಬಣ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸರಕಾರವು ಇಷ್ಟೊಂದು ಹೃದಯಹೀನವಾಗಿರಲು ಹೇಗೆ ಸಾಧ್ಯ,ಅವರು ಅನುಕಂಪದ ಎಲ್ಲ ಭಾವನೆಯನ್ನು ಕಳೆದುಕೊಂಡಿದ್ದಾರೆಯೇ ಎಂದು ವೇಣುಗೋಪಾಲ ಪ್ರಶ್ನಿಸಿದ್ದಾರೆ.