ಪ್ರಭಾವಿ ವ್ಯಕ್ತಿಯಿಂದ ಪತ್ನಿಗೆ ಲೈಂಗಿಕ ಕಿರುಕುಳ: ಆತ್ಮಹತ್ಯೆಗೆ ಶರಣಾದ ಪತಿ-ಮಕ್ಕಳು

Update: 2024-03-05 08:18 GMT

ಮಂಡ್ಸೌರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಮಂಡ್ಸೌರ್ ನಲ್ಲಿನ ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಆಕೆಯ ಪತಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಶಾಮ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯ ರುಂಡಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯು ಕಂಬಳಿ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ಆದರೆ, ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರನ್ನು ಸಮಾಧಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲಗಳ ಪ್ರಕಾರ, ಮೃತ ವ್ಯಕ್ತಿಯು ತನ್ನ ವ್ಯಾಪಾರದ ಸಂಬಂಧ ಮೂರು ತಿಂಗಳುಗಳ ಕಾಲ ಗ್ರಾಮದಿಂದ ಹೊರ ಹೋಗಿದ್ದ. ಈ ನಡುವೆ, ರಾಜು ಎಂದು ಗುರುತಿಸಲಾಗಿರುವ ವ್ಯಕ್ತಿಯು ಆತನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯ ನಂತರ, ಸಂತ್ರಸ್ತರ ಕುಟುಂಬದ ಸದಸ್ಯರು ಶಾಮ್ ಗಢ್ ಪೊಲೀಸ್ ಠಾಣೆಗೆ ವರದಿ ಮಾಡಿದ್ದಾರೆ. ಆದರೆ, ಆರೋಪಿಯ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಬೆನ್ನಿಗೇ, ರವಿವಾರ ರಾತ್ರಿ ಸಂತ್ರಸ್ತೆಯ ಪತಿಯು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News