ಅಹಮದಾಬಾದ್ ನಲ್ಲಿನ ಅದಾನಿ ಕಚೇರಿ ಮತ್ತು ನಿವಾಸಕ್ಕೆ ಭೇಟಿ ನೀಡಿದ ಶರದ್ ಪವಾರ್!

Update: 2023-09-23 17:49 GMT

                                                 ಗೌತಮ್ ಅದಾನಿ , ಶರದ್ ಪವಾರ್| Photo: PTI 

ಅಹಮದಾಬಾದ್: ಅಮೆರಿಕಾದ ಕಿರು ಅವಧಿಯ ಮಾರಾಟ ಸಂಸ್ಥೆಯಾದ ಹಿಂಡೆನ್ ಬರ್ಗ್ ಆರೋಪವನ್ನು ಆಧರಿಸಿ ವಿವಾದಾತ್ಮಕ ಕೋಟ್ಯಧಿಪತಿ ಗೌತಮ್ ಅದಾನಿ ವಿರುದ್ಧ ಜಂಟಿ ಸಂಸದೀಯ ತನಿಖೆಗೆ ಆದೇಶಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿರುವ ಬೆನ್ನಿಗೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ವರಿಷ್ಠ ಶರದ್ ಪವಾರ್ ಅಹಮದಾಬಾದ್ ನಲ್ಲಿರುವ ಗೌತಮ್ ಅದಾನಿಯ ಕಚೇರಿ ಹಾಗೂ ನಿವಾಸಕ್ಕೆ ಭೇಟಿ ನೀಡಿರುವುದು ರಾಜಕೀಯ ಪಂಡಿತರ ಹುಬ್ಬೇರುವಂತೆ ಮಾಡಿದೆ ಎಂದು deccanherald.com ವರದಿ ಮಾಡಿದೆ.

ಅಹಮದಾಬಾದ್ ನಲ್ಲಿನ ಸಾನಂದ್ ಗ್ರಾಮದಲ್ಲಿರುವ ಕಾರ್ಖಾನೆಯೊಂದನ್ನು ಪವಾರ್ ಹಾಗೂ ಅದಾನಿ ಮೊದಲಿಗೆ ಉದ್ಘಾಟಿಸಿದರು. ಇದಾದ ನಂತರ ಪವಾರ್ ಅವರು ಅಹಮದಾಬಾದ್ ನಲ್ಲಿರುವ ಅದಾನಿ ಕಚೇರಿಗಳು ಹಾಗೂ ಅವರ ನಿವಾಸಕ್ಕೆ ಭೇಟಿ ನೀಡಿದರು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಭೇಟಿಯ ಸಂದರ್ಭದಲ್ಲಿ ಏನೆಲ್ಲ ಚರ್ಚೆಯಾಯಿತು ಎಂಬುದರ ಬಗ್ಗೆ ತಕ್ಷಣಕ್ಕೆ ಮಾಹಿತಿ ದೊರೆತಿಲ್ಲ.

X ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಪವಾರ್, ಕಾರ್ಖಾನೆಯೊಂದರಲ್ಲಿ ತಾವು ಮತ್ತು ಅದಾನಿ ಇಬ್ಬರೂ ರಿಬ್ಬನ್ ಕತ್ತರಿಸುತ್ತಿರುವ ಚಿತ್ರಗಳನ್ನು ಹಾಕಿದ್ದಾರೆ. “ಗೌತಮ್ ಅದಾನಿಯೊಂದಿಗೆ ಭಾರತದ ಪ್ರಪ್ರಥಮ ಲ್ಯಾಕ್ಟೊಫೆರಿನ್ ಘಟಕವಾದ ಎಕ್ಸಿಮ್ ಪವರ್ ಅನ್ನು ಗುಜರಾತ್ ನ ಚರ್ಚರ್ ವಾಡಿಯ ವಾಸ್ನಾದಲ್ಲಿ ಉದ್ಘಾಟಿಸುವ ಅವಕಾಶ ದೊರೆತಿರುವುದು ನನ್ನ ಭಾಗ್ಯ” ಎಂದು ಪವಾರ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ, ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಮುಂಬೈನ ಸಿಲ್ವರ್ ಓಕ್ ನಲ್ಲಿರುವ ಪವಾರ್ ನಿವಾಸಕ್ಕೆ ಅದಾನಿ ಭೇಟಿ ನೀಡಿದ್ದರು. ಅದಾನಿಯ ರಕ್ಷಣೆಗೆ ಧಾವಿಸಿದ್ದ ಪವಾರ್ ಅವರು, ಹಿಂಡೆನ್ ಬರ್ಗ್ ಸುತ್ತ ಏರ್ಪಟ್ಟಿರುವ ವ್ಯಾಖ್ಯಾನವನ್ನು ಟೀಕಿಸಿದ ಕೆಲವೇ ದಿನಗಳ ಅಂತರದಲ್ಲಿ ಸುಮಾರು ಎರಡು ಗಂಟೆಗಳ ಅವಧಿಯ ಈ ಭೇಟಿ ನಡೆದಿತ್ತು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News