ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: 45 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಶಿಂಧೆ ನೇತೃತ್ವದ ಶಿವಸೇನೆ

Update: 2024-10-23 05:56 GMT

ಏಕನಾಥ್ ಶಿಂಧೆ (PTI)

ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 45 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

2022ರಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಶಿಂಧೆ ಬಣ ಸೇರಿದ ಬಹುತೇಕ ಎಲ್ಲಾ ಶಾಸಕರಿಗೆ ಈ ಬಾರಿ ಶಿಂಧೆ ಬಣದಿಂದ ಟಿಕೆಟ್ ನೀಡಲಾಗಿದೆ. ಥಾಣೆ ನಗರದ ಕೊಪ್ರಿ-ಪಂಚಪಖಾಡಿಯಿಂದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಣಕ್ಕಿಳಿಯಲಿದ್ದಾರೆ.

ಸಚಿವರಾದ ಗುಲಾಬ್ರಾವ್ ಪಾಟೀಲ್, ದೀಪಕ್ ಕೇಸರಕರ್, ಅಬ್ದುಲ್ ಸತ್ತಾರ್ ಮತ್ತು ಶಂಬುರಾಜ್ ದೇಸಾಯಿ ಅವರಿಗೆ ಕ್ರಮವಾಗಿ ಜಲಗಾಂವ್ ಗ್ರಾಮಾಂತರ, ಸಾವಂತವಾಡಿ, ಸಿಲ್ಲೋಡ್ ಮತ್ತು ಪಟಾನ್ ಕ್ಷೇತ್ರಗಳಿಂದ ಟಿಕೆಟ್ ನೀಡಲಾಗಿದೆ.

ಸಚಿವ ದಾದಾ ಭೂಸೆ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಹೊರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಚಿವರಾದ ಉದಯ್ ಸಾಮಂತ್ ಮತ್ತು ತಾನಾಜಿ ಸಾವಂತ್ ಕ್ರಮವಾಗಿ ರತ್ನಗಿರಿ ಮತ್ತು ಪರಂದಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ರಾಜಾಪುರದಿಂದ ಸಚಿವ ಉದಯ್ ಸಾಮಂತ್ ಸಹೋದರ ಕಿರಣ್ ಸಾಮಂತ್ ಗೆ ಟಿಕೆಟ್ ನೀಡಲಾಗಿದೆ. ದಿವಂಗತ ಶಾಸಕ ಅನಿಲ್ ಬಾಬರ್ ಅವರ ಪುತ್ರ ಸುಹಾಸ್ ಬಾಬರ್ ಸಾಂಗ್ಲಿ ಜಿಲ್ಲೆಯ ಖಾನಾಪುರದಿಂದ ಸ್ಪರ್ಧಿಸಲಿದ್ದಾರೆ. ಸಂಸದ ಸಂದೀಪನ್ ಬುಮ್ರೆ ಅವರ ಪುತ್ರ ವಿಲಾಸ್ ಬುಮ್ರೆ ಪೈಥಾನ್‌ ನಿಂದ ಸ್ಪರ್ಧಿಸಲಿದ್ದಾರೆ.

ಮಹಾಯುತಿ ಒಕ್ಕೂಟದ ಮೈತ್ರಿಪಕ್ಷ ಬಿಜೆಪಿ ರವಿವಾರ 99 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲಿ ಇದೀಗ ಶಿಂಧೆ ನೇತೃತ್ವದ ಶಿವಸೇನೆ 45 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 288 ಸದಸ್ಯ ಬಲವನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 160 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇನ್ನುಳಿದ ಸ್ಥಾನಗಳಲ್ಲಿ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ ಸಿಪಿ ಸ್ಪರ್ಧಿಸಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News