ಪ್ರಧಾನಿಯ ಭಾಷೆ ಹೀಗೇ ಇರಬೇಕೇ?: ಇಂಡಿಯಾ ಬಣದ ಕುರಿತು ‘ಮುಜ್ರಾ’ ಹೇಳಿಕೆ ಹಿನ್ನೆಲೆ ಮೋದಿಗೆ ತೇಜಸ್ವಿ ಯಾದವ್ ಪತ್ರ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಇಂಡಿಯಾ ಮೈತ್ರಿಕೂಟ ಕುರಿತು ‘ಮುಜ್ರಾ’ ಹೇಳಿಕೆಯ ಹಿನ್ನೆಲೆಯಲ್ಲಿ ರವಿವಾರ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಪ್ರಧಾನಿ ಜನರಿಗೆ ಹಲವಾರು ಆಧಾರರಹಿತ ಮತ್ತು ಸುಳ್ಳು ವಿಷಯಗಳನ್ನು ಹೇಳಿದ್ದಾರೆ ಎಂದು ಯಾದವ್ ಆರೋಪಿಸಿದ್ದಾರೆ.
ಪ್ರಧಾನಿ ವಿರುದ್ಧ ತೀವ್ರವಾಗಿ ಹರಿಹಾಯ್ದಿರುವ ಯಾದವ್, ಈ ವಿಶಾಲ ಹೃದಯದ ದೇಶದ ಪ್ರಧಾನಿ ಭಾಷೆಯು ಹೀಗೆಯೇ ಇರಬೇಕೇ ಎಂದು ಪ್ರಶ್ನಿಸಿದ್ದಾರೆ.
‘ಇಂದು ಬಿಹಾರಕ್ಕೆ ಭೇಟಿ ನೀಡಿದ ನೀವು ನಿಮ್ಮಿಂದ ಸಾಧ್ಯವಿದ್ದಷ್ಟು ಆಧಾರರಹಿತ ಮತ್ತು ಸುಳ್ಳು ವಿಷಯಗಳನ್ನು ಹೇಳಿದ್ದೀರಿ. ನೀವು ನಿಮ್ಮ ಹುದ್ದೆಯ ಘನತೆಯನ್ನು ಗಮನದಲ್ಲಿಟ್ಟುಕೊಂಡು ಚರ್ಚೆಯ ಔನ್ನತ್ಯವನ್ನು ಕಾಯ್ದುಕೊಳ್ಳುತ್ತೀರಿ ಎಂದು ಈಗ ನಿಮ್ಮಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇಂದು ನೀವು ಮುಜ್ರಾ ಮತ್ತು ಮಂಗಳ ಸೂತ್ರದ ಬಗ್ಗೆ ಮಾತನಾಡುತ್ತಿದ್ದೀರಿ, ನಮಗೆ ನಿಮ್ಮ ಬಗ್ಗೆ ಚಿಂತೆಯಾಗಿದೆ. ಈ ವಿಶಾಲ ಹೃದಯದ ದೇಶದ ಪ್ರಧಾನಿ ಭಾಷೆಯು ಹೀಗೆಯೇ ಇರಬೇಕೇ? ನೀವೇ ಯೋಚಿಸಿ ಮತ್ತು ನಿರ್ಧರಿಸಿ ’ಎಂದು ಯಾದವ ಪತ್ರದಲ್ಲಿ ಬರೆದಿದ್ದಾರೆ.
ಮೋದಿ ಬದುಕಿರುವವರೆಗೂ ಬಿಹಾರ,ಎಸ್ಸಿ/ಎಸ್ಟಿಗಳು ಮತ್ತು ಒಬಿಸಿ ಸಮುದಾಯಗಳ ಹಕ್ಕುಗಳನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ತಾನು ಗ್ಯಾರಂಟಿ ನೀಡುತ್ತಿದ್ದೇನೆ. ಪ್ರತಿಪಕ್ಷಗಳು ತಮ್ಮ ವೋಟ್ ಬ್ಯಾಂಕ್ ಎದುರು ಮುಜ್ರಾ ಮಾಡಲು ಬಯಸಿದ್ದರೆ ಅದಕ್ಕೆ ಅವು ಸ್ವತಂತ್ರವಾಗಿವೆ ಎಂದು ಪ್ರಧಾನಿ ಶನಿವಾರ ಬಿಹಾರದಲ್ಲಿ ರ್ಯಾಲಿಯೊಂದರಲ್ಲಿ ಹೇಳಿದ್ದರು.
‘ಬಿಹಾರದಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ಸರಕಾರದ ವೆಚ್ಚದಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಿದ್ದೇವೆ. ಅದರ ವಾಸ್ತವಿಕತೆಯ ಬಗ್ಗೆ ನಿಮಗೂ ಅರಿವಿದೆ. ಸಮೀಕ್ಷೆಯ ಆಧಾರದಲ್ಲಿ ನಾವು ಮೀಸಲಾತಿಯ ವ್ಯಾಪ್ತಿಯನ್ನು ಶೇ.75ಕ್ಕೆ ಹೆಚ್ಚಿಸಿದ್ದೇವೆ ಮತ್ತು ಇದನ್ನು ಸಂವಿಧಾನದ ಒಂಭತ್ತನೇ ಪರಿಚ್ಛೇದದಲ್ಲಿ ಸೇರಿಸುವಂತೆ ಪದೇ ಪದೇ ಕೈಗಳನ್ನು ಜೋಡಿಸಿ ನಿಮಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೆ ಪ್ರಧಾನಿಗಳೇ, ನೀವು ಮೂಲಭೂತವಾಗಿ ಹಿಂದುಳಿದವರು ಮತ್ತು ದಲಿತ ವಿರೋಧಿ ಮನಃಸ್ಥಿತಿಯನ್ನು ಹೊಂದಿದ್ದೀರಿ. ನಮ್ಮ ಈ ಮಹತ್ವದ ಮನವಿಯನ್ನು ನೀವು ಗಣನೆಗೆ ತೆಗೆದುಕೊಳ್ಳುತ್ತಿಲ್ಲ’ ಎಂದಿದ್ದಾರೆ.
ಮೀಸಲಾತಿ ವಿಷಯದಲ್ಲಿ ಮೋದಿ ವಿರುದ್ಧ ದಾಳಿ ನಡೆಸಿರುವ ಯಾದವ್, ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಗಳನ್ನು ಒದಗಿಸುವಂತೆ ನಾವು ಪ್ರಧಾನಿಗಳಿಗೆ ಮನವಿ ಮಾಡಿಕೊಳ್ಳುತ್ತಲೇ ಇದ್ದೇವೆ, ಆದರೆ ನೀವು ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಬರೆದಿದ್ದಾರೆ.
ಈ ಪತ್ರದೊಂದಿಗೆ ಗುಜರಾತಿನಲ್ಲಿ ಒಬಿಸಿ ವರ್ಗದಡಿ ಮುಸ್ಲಿಮ್ ಜಾತಿಗಳ ಪಟ್ಟಿಯನ್ನೂ ಲಗತ್ತಿಸಿದ್ದೇನೆ. ಗುಜರಾತಿನಲ್ಲಿ ಮಸ್ಲಿಮ್ ಸಮುದಾಯದ ಜಾತಿಗಳೂ ಮೀಸಲಾತಿಯನ್ನು ಪಡೆದಿವೆ ಎಂಬ ಕನಿಷ್ಠ ಜ್ಞಾನವೂ ನಿಮಗಿಲ್ಲದಿರಬಹುದು. 13 ವರ್ಷಕ್ಕೂ ಅಧಿಕ ಸಮಯ ನೀವು ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ. ಆದ್ದರಿಂದ ಗೊಂದಲವನ್ನು ಹರಡುವ ಮತ್ತು ದ್ವೇಷವನ್ನು ಬಿತ್ತುವ ರಾಜಕೀಯದಿಂದ ದೂರವಿರಿ ಎಂದು ಯಾದವ ಹೇಳಿದ್ದಾರೆ.