ಸರ್ಕಾರಿ ಬಂಗಲೆ ತೆರವುಗೊಳಿಸದ ಮಹುವಾ ಮೊಯಿತ್ರಾಗೆ ಶೋಕಾಸ್ ನೋಟಿಸ್ ಜಾರಿ
ಹೊಸದಿಲ್ಲಿ: ಸರ್ಕಾರಿ ಬಂಗಲೆಯನ್ನು ತೆರವುಗೊಳಿಸದ ಮಾಜಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಸೋಮವಾರ ಎಸ್ಟೇಟ್ ಗಳ ನಿರ್ದೇಶನಾಲಯವು ನೋಟಿಸ್ ಜಾರಿಗೊಳಿಸಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲವೊಂದು ತಿಳಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಡಿಸೆಂಬರ್ 8ರಂದು ಲೋಕಸಭೆಯಿಂದ ಉಚ್ಚಾಟನೆಗೊಂಡಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರಿಗೆ ಜನವರಿ 7ರೊಳಗೆ ತಮಗೆ ಮಂಜೂರು ಮಾಡಿರುವ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಇದೀಗ ಎಸ್ಟೇಟ್ ಗಳ ನಿರ್ದೇಶನಾಲಯವು ಮೂರು ದಿನಗಳೊಳಗೆ ಈ ಕುರಿತು ಉತ್ತರಿಸುವಂತೆ ನೋಟಿಸ್ ಜಾರಿಗೊಳಿಸಿದೆ.
“ಸರ್ಕಾರಿ ಬಂಗಲೆಯನ್ನು ಇದುವರೆಗೂ ಯಾಕೆ ತೆರವುಗೊಳಿಸಿಲ್ಲ ಎಂದು ಮೂರು ದಿನಗಳೊಳಗೆ ಉತ್ತರಿಸುವಂತೆ ಮಹುವಾ ಮೊಯಿತ್ರಾ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ಸರ್ಕಾರಿ ಬಂಗಲೆಯಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಎಸ್ಟೇಟ್ ಗಳ ನಿರ್ದೇಶನಾಲಯದ ಮೊರೆ ಹೋಗುವಂತೆ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾಗೆ ಜನವರಿ 4ರಂದು ದಿಲ್ಲಿ ಹೈಕೋರ್ಟ್ ಸೂಚಿಸಿತ್ತು.