ಲೋಕಸಭೆಗೆ ಪ್ರದರ್ಶನ ಫಲಕ ತರದಂತೆ ಸಂಸದರಿಗೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ
ಹೊಸದಿಲ್ಲಿ: ಲೋಕಸಭೆಗೆ ಪ್ರದರ್ಶನ ಫಲಕಗಳನ್ನು ತರುತ್ತಿರುವ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರಿಗೆ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸದನದಲ್ಲಿ ಘನತೆ ಹಾಗೂ ಶಿಸ್ತು ಕಾಪಾಡುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.
ತನ್ನ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಬಿಜೆಪಿ ಸಂಸದ ರಮೇಶ್ ಬಿದುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಎಸ್‌ಪಿ ಸದಸ್ಯ ದಾನಿಶ್ ಅಲಿ ಕುತ್ತಿಗೆಗೆ ಪ್ರದರ್ಶನ ಫಲಕವನ್ನು ನೇತು ಹಾಕಿಗೊಂಡು ಬಂದ ಒಂದು ದಿನದ ಬಳಿಕ ಸ್ಪೀಕರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ನಿನ್ನೆ ನಡೆದ ಸಂಸದೀಯ ವ್ಯವಹಾರಗಳ ಸಲಹಾ ಸಮಿತಿಯ ಸಭೆಯಲ್ಲಿ ನೂತನ ಸಂಸತ್ ಭವನಕ್ಕೆ ಪ್ರದರ್ಶನ ಫಲಕ ತರುವುದಿಲ್ಲ ಎಂದು ಪಕ್ಷಗಳು ಒಮ್ಮತದ ನಿರ್ಣಯಕ್ಕೆ ಬಂದಿವೆ. ಸಂಸತ್ತಿನಲ್ಲಿ ಪ್ರತಿಯೊಬ್ಬರು ಘನತೆ ಹಾಗೂ ಶಿಸ್ತು ಕಾಪಾಡುವಂತೆ ನಾನು ಪ್ರತಿಯೊಬ್ಬರಲ್ಲಿ ವಿನಂತಿಸುತ್ತೇನೆ. ಪ್ರದರ್ಶನ ಫಲಕಗಳನ್ನು ತರುವ ಸಂಸದರ ವಿರುದ್ಧ ನಾನು ಕ್ರಮ ಕೈಗೊಳ್ಳಲಿದ್ದೇನೆ’’ ಎಂದು ಬಿರ್ಲಾ ಹೇಳಿದ್ದಾರೆ.
ಅಲಿ ಅವರು ಸೋಮವಾರ ಕುತ್ತಿಗೆಗೆ ಪ್ರದರ್ಶನ ಫಲಕವನ್ನು ನೇತು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿರುವ ಸಂದರ್ಭ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಇದನ್ನು ಸ್ಪೀಕರ್ ಅವರ ಗಮನಕ್ಕೆ ತಂದರು ಹಾಗೂ ತಮ್ಮ ಕುತ್ತಿಗೆಯಿಂದ ಪ್ರದರ್ಶನ ಫಲಕವನ್ನು ತೆಗೆಯಲು ಅಲಿ ಅವರನ್ನು ವಿನಂತಿಸುವಂತೆ ಮನವಿ ಮಾಡಿದರು.
ಅನಂತರ ಸ್ಪೀಕರ್ ಸದನಕ್ಕೆ ಪ್ರದರ್ಶನ ಫಲಕದೊಂದಿಗೆ ಬರುವುದು ಸಂಸತ್‌ನ ನಿಯಮಗಳಿಗೆ ವಿರುದ್ಧವಾದುದು ಎಂದು ದಾನಿಶ್ ಅಲಿಗೆ ತಿಳಿಸಿದರು ಹಾಗೂ ಕೂಡಲೇ ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು.
‘‘ಸದನದ ನಿಯಮವನ್ನು ಉಲ್ಲಂಘಿಸಬಾರದು ಎಂದು ನಾನು ಪ್ರತಿಯೊಬ್ಬ ಸದಸ್ಯನಲ್ಲಿ ಮನವಿ ಮಾಡುತ್ತೇನೆ. ಪ್ರತಿಯೊಬ್ಬರು ಶಿಷ್ಟಾಚಾರವನ್ನು ಅನುಸರಿಸಬೇಕೆಂದು ಹಾಗೂ ಸಕಾರಾತ್ಮಕ ಮನಸ್ಸಿನಿಂದ ಬರಬೇಕು ಎಂದು ನಾನು ನಿರೀಕ್ಷಿಸುತ್ತೇನೆ’’ ಎಂದು ಅವರು ಹೇಳಿದರು.