ಮಣಿಪುರ ಹಿಂಸಾಚಾರದ ಬಗ್ಗೆ 1800 ಗಂಟೆಗಳ ದೀರ್ಘ ಮೌನದ ಬಳಿಕ ಕೇವಲ 30 ಸೆಕೆಂಡ್ ಮಾತಾಡಿದರು: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.
ಹೊಸದಿಲ್ಲಿ: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ಅವರ ಹೇಳಿಕೆಯು ತುಂಬಾ ಕಡಿಮೆಯಾಗಿದೆ ಮತ್ತು ಬಹಳ ತಡವಾಗಿ ಬಂದಿದೆ ಎಂದು ಟೀಕಿಸಿದೆ. ಅಲ್ಲದೆ, ಇನ್ನು ಮುಂದೆ ಕೇವಲ ಮಾತುಗಳು ಸಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
"1800 ಗಂಟೆಗಳ ಅಕ್ಷಮ್ಯ ಮೌನದ ನಂತರ, ಪ್ರಧಾನಿ ಅಂತಿಮವಾಗಿ ಒಟ್ಟು 30 ಸೆಕೆಂಡುಗಳ ಕಾಲ ಮಣಿಪುರದ ಕುರಿತು ಮಾತನಾಡಿದರು" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
"1800 ಗಂಟೆಗಳ ಅಕ್ಷಮ್ಯ ಮೌನದ ನಂತರ, ಅಂತಿಮವಾಗಿ ಮಣಿಪುರದ ಬಗ್ಗೆ ಒಟ್ಟು 30 ಸೆಕೆಂಡುಗಳ ಕಾಲ ಪ್ರಧಾನಿ ಮಾತನಾಡಿದರು. ನಂತರ, ಮಣಿಪುರದ ಬೃಹತ್ ಆಡಳಿತ ವೈಫಲ್ಯಗಳು ಮತ್ತು ಮಾನವೀಯ ದುರಂತವನ್ನು ಇತರ ರಾಜ್ಯಗಳಲ್ಲಿ, ವಿಶೇಷವಾಗಿ ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಮೀಕರಿಸುವ ಮೂಲಕ ಪ್ರಧಾನಿ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಮತ್ತು ಗುಜರಾತ್‌ನಂತಹ ರಾಜ್ಯಗಳ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿರ್ಲಕ್ಷಿಸಲಾಗಿವೆ, ”ಎಂದು ಕಾಂಗ್ರೆಸ್ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
"ಇದು ತುಂಬಾ ತಡವಾಯಿತು. ಅಲ್ಲದೆ, ಕೇವಲ ಮಾತುಗಳು ಇನ್ನು ಮುಂದೆ ಸಾಕಾಗುವುದಿಲ್ಲ. ಕ್ರಿಯೆಗಳು ಜೋರಾಗಿ ಮಾತನಾಡಬೇಕು" ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಮಣಿಪುರ ಹಿಂಸಾಚಾರದ ಹೊಣೆಗಾರಿಕೆಯಿಂದ ಪ್ರಧಾನಿ ಮೋದಿ ಮತ್ತು ಗೃಹ ಸಚಿವರು (ಅಮಿತ್ ಶಾ) ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ವಿಷಯವನ್ನು ಪ್ರಧಾನಿ ಮೋದಿ ಬದಿಗೊತ್ತಿದ್ದಾರೆ ಮತ್ತು ಶಾಂತಿಗಾಗಿ ಯಾವುದೇ ಮನವಿ ಮಾಡುತ್ತಿಲ್ಲ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಮಣಿಪುರದ ವಿಡಿಯೋ ಕುರಿತು ಮೌನ ಮುರಿದಿರುವ ಪ್ರಧಾನಿ ಮೋದಿ ರಾಜಸ್ಥಾನ ಮತ್ತು ಛತ್ತೀಸ್‌ಗಢದ ಬಗ್ಗೆ ಪ್ರಸ್ತಾಪಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಅದೇ ವೇಳೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಮಹಿಳೆಯರ ಸುರಕ್ಷತೆಯನ್ನು ರಕ್ಷಿಸಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.