ಚುನಾವಣೆ ಮುನ್ನ ಕೇಂದ್ರೀಯ ಸಂಸ್ಥೆಗಳ ‘‘ದುರ್ಬಳಕೆ’’ ನಿಲ್ಲಿಸಿ
ಹೊಸದಿಲ್ಲಿ: ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಛತ್ತೀಸ್‌ಗಢ ಮತ್ತು ರಾಜಸ್ಥಾನಗಳ ರಾಜ್ಯ ಸರಕಾರಗಳನ್ನು ದಮನಿಸಲು ಕೇಂದ್ರ ಸರಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ‘‘ದುರ್ಬಳಕೆ’’ ಮಾಡುವುದನ್ನು ನಿಲ್ಲಿಸಲು ಮಧ್ಯಪ್ರವೇಶಿಸಬೇಕು ಎಂದು ಕಾಂಗ್ರೆಸ್ ಬುಧವಾರ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಮೊದಲ ಹಂತದ ಮತದಾನ ಛತ್ತೀಸ್‌ಗಢದಲ್ಲಿ ಮಂಗಳವಾರ ನಡೆದಿದೆ. ಅಲ್ಲಿ ಎರಡನೇ ಹಂತದ ಮತದಾನ ನವೆಂಬರ್ 17ರಂದು ನಡೆಯಲಿದೆ. ರಾಜಸ್ಥಾನದಲ್ಲಿ ನವೆಂಬರ್ 25ರಂದು ಮತದಾನ ನಡೆಯಲಿದೆ.
ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 20ರಲ್ಲಿ ಮತದಾನ ನಡೆಯುವ ಕೆಲವೇ ದಿನಗಳ ಮೊದಲು, ಮಹಾದೇವ್ ಆ್ಯಪ್ ಎಂಬ ಬೆಟ್ಟಿಂಗ್ ಆ್ಯಪ್‌ನ ಮಾಲೀಕರಿಂದ ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ 508 ಕೋಟಿ ರೂ. ಸ್ವೀಕರಿಸಿದ್ದಾರೆ ಎಂದು ಅನುಷ್ಠಾನ ನಿರ್ದೇಶನಾಲಯ ಆರೋಪಿಸಿತ್ತು. ಈಗ ಮಹಾದೇವ್ ಆ್ಯಪನ್ನು ಕೇಂದ್ರ ಸರಕಾರ ನಿಷೇಧಿಸಿದೆ.
ಆದರೆ, ಈ ಆರೋಪಗಳನ್ನು ಕಾಂಗ್ರೆಸ್ ನಿರಾಕರಿಸಿದೆ. ಮುಖ್ಯಮಂತ್ರಿ ಬಾಘೆಲ್‌ರ ಹೆಸರು ಕೆಡಿಸಲು ಮತ್ತು ಚುನಾವಣೆಯ ಮೇಲೆ ಪ್ರಭಾವ ಬೀರಲು ಅನುಷ್ಠಾನ ನಿರ್ದೇಶನಾಲಯವು ಇಂಥ ಹೇಳಿಕೆಯನ್ನು ನೀಡಿದೆ ಎಂದು ಅದು ಹೆಳಿಕೊಂಡಿದೆ.
ಕಾಂಗ್ರೆಸ್ ಪಕ್ಷವು ಬುಧವಾರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಮಹಾದೇವ್ ಆ್ಯಪ್ ಪ್ರಕರಣದಲ್ಲಿ ವರ್ಗಾವಣೆಯಾಗಿದೆಯೆನ್ನಲಾದ ಅಕ್ರಮ ಹಣದೊಂದಿಗೆ ಬಾಘೆಲ್ ಹೆಸರನ್ನು ತಪ್ಪಾಗಿ ತಳುಕು ಹಾಕಿ ಅನುಷ್ಠಾನ ನಿರ್ದೇಶನಾಲಯವು ನವೆಂಬರ್ 3ರಂದು ಪತ್ರಿಕಾ ಪ್ರಕಟನೆ ಹೊರಡಿಸಿದೆ ಎಂದು ಅದು ಆರೋಪಿಸಿದೆ.
‘‘ಪ್ರಾಥಮಿಕ ತನಿಖೆಯನ್ನೂ ನಡೆಸದೆ ಅನುಷ್ಠಾನ ನಿರ್ದೇಶನಾಲಯವು ಅವಸರವಸರವಾಗಿ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದೆ. ಅದರಲ್ಲಿ ಹಾಲಿ ಮುಖ್ಯಮಂತ್ರಿಯ ಹೆಸರನ್ನು ಉಡಾಫೆಯಿಂದ ಸೇರಿಸಲಾಗಿದೆ. ಇದು ಅನುಷ್ಠಾನ ನಿರ್ದೇಶನಾಲಯದ ದುರುದ್ದೇಶ ಮತ್ತು ರಾಜಕೀಯ ಪ್ರೇರಿತ ಸ್ವಭಾವವನ್ನು ತೋರಿಸುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ತನ್ನ ರಾಜಕೀಯ ಉದ್ದೇಶಗಳ ಸಾಧನೆಗಾಗಿ ಕೇಂದ್ರೀಯ ಸಂಸ್ಥೆಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿರುವುದನ್ನು ಇದು ಸಾಬೀತುಪಡಿಸುತ್ತದೆ’’ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ ಕಾಂಗ್ರೆಸ್ ಆರೋಪಿಸಿದೆ.
‘‘ಮಹಾದೇವ್ ಆ್ಯಪ್ ಬಗ್ಗೆ ಛತ್ತೀಸ್‌ಗಢ ಪೊಲೀಸರು ಎಂಟು ತಿಂಗಳ ಹಿಂದೆಯೇ ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಮುಖ್ಯಮಂತ್ರಿ ಕೂಡ ಸೂಚಿಸಿದ್ದಾರೆ. ಆದರೆ, ಆಗ ಕೇಂದ್ರ ಸರಕಾರ ಏನೂ ಮಾಡಿರಲಿಲ್ಲ’’ ಎಂದು ಕಾಂಗ್ರೆಸ್ ನಾಯಕ ಅಭಿಶೇಕ್ ಮನು ಸಿಂಘ್ವಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಚುನಾವಣೆ ಸಮೀಪಿಸುತ್ತಿದ್ದಂತೆಯೇ, ಬಿಜೆಪಿ ನಾಯಕರು, ಪ್ರಧಾನಿ ಮತ್ತು ಅನುಷ್ಠಾನ ನಿರ್ದೇಶನಾಲಯವು ಹೊಸ ಹೊಸ ವಿಷಯಗಳನ್ನು ಮುನ್ನೆಲೆಗೆ ತರುವುದನ್ನು ಆರಂಭಿಸಿತು. ಕೇಂದ್ರ ಸರಕಾರವು ಈ ಆ್ಯಪನ್ನು ಮೊದಲೇ ಯಾಕೆ ನಿಷೇಧಿಸಲಿಲ್ಲ?’’ ಎಂದು ಅವರು ಪ್ರಶ್ನಿಸಿದರು.
ರಾಜಸ್ಥಾನದಲ್ಲಿ, ನವೆಂಬರ್ 3ರಂದು ಅನುಷ್ಠಾನ ನಿರ್ದೇಶನಾಲಯವು, ಜಲಜೀವನ ಯೋಜನೆಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ರಾಜ್ಯದ ಸಚಿವ ಮಹೇಶ್ ಜೋಶಿ ಮತ್ತು ಇತರರ ನಿವಾಸಗಳ ಮೇಲೆ ದಾಳಿ ನಡೆಸಿದೆ.