ಆರು ರಾಜ್ಯಗಳ ಎಂಟು ಲೋಕಸಭಾ ಕ್ಷೇತ್ರಗಳ ಇವಿಎಂ ಪರಿಶೀಲನೆಗೆ ಚುನಾವಣಾ ಆಯೋಗಕ್ಕೆ ಅರ್ಜಿಗಳ ಸಲ್ಲಿಕೆ

Update: 2024-06-20 16:27 GMT

ಸಾಂದರ್ಭಿಕ ಚಿತ್ರ |  PC : PTI 

ಹೊಸದಿಲ್ಲಿ : ಜೂ.4ರಂದು ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಪ್ರಕಟಗೊಂಡ ಬಳಿಕ ಚುನಾವಣಾ ಆಯೋಗವು ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳಲ್ಲಿ ಅಳವಡಿಸಲಾದ ಮೈಕ್ರೋ-ಕಂಟ್ರೋಲರ್ ಚಿಪ್‌ಗಳಲ್ಲಿ ಹಸ್ತಕ್ಷೇಪ ಅಥವಾ ಮಾರ್ಪಾಡುಗಳ ಪರಿಶೀಲನೆಗಾಗಿ ಕೋರಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ನೊಂದ ಅಭ್ಯರ್ಥಿಗಳಿಂದ ಎಂಟು ಅರ್ಜಿಗಳನ್ನು ಸ್ವೀಕರಿಸಿದೆ.

ಬಿಜೆಪಿಯ ಅಹ್ಮದ್‌ನಗರ (ಮಹಾರಾಷ್ಟ್ರ) ಅಭ್ಯರ್ಥಿ ಸುಜಯ ವಿಖೆ-ಪಾಟೀಲ್ ಅವರು 40 ಮತಗಟ್ಟೆಗಳಲ್ಲಿಯ ಇವಿಎಮ್‌ಗಳ ಪರಿಶೀಲನೆಯನ್ನು ಕೋರಿದ್ದಾರೆ. ಅವರು ಎನ್‌ಸಿಪಿ (ಶರದ ಪವಾರ್) ಅಭ್ಯರ್ಥಿ ನಿಲೇಶ ಲಂಕೆ ವಿರುದ್ಧ ಸೋತಿದ್ದರು. ಚುನಾವಣಾ ಆಯೋಗವು ಹಂಚಿಕೊಂಡಿರುವ ಮಾಹಿತಿಯಂತೆ ಓರ್ವ ವೈಎಸ್‌ಆರ್‌ಸಿಪಿ ಮತ್ತು ಓರ್ವ ಡಿಎಂಡಿಕೆ ಅಭ್ಯರ್ಥಿಗಳೂ ಅರ್ಜಿದಾರರಲ್ಲಿ ಸೇರಿದ್ದಾರೆ.

ಒಟ್ಟು 92 ಮತಗಟ್ಟೆಗಳಲ್ಲಿಯ ಇವಿಎಮ್‌ಗಳ ಪರಿಶೀಲನೆಯನ್ನು ಕೋರಲಾಗಿದೆ.

ಚುನಾವಣಾ ಆಯೋಗವು ಜೂ.1ರಂದು ಹೊರಡಿಸಿದ್ದ ಪ್ರಮಾಣಿತ ನಿರ್ವಹಣಾ ಕಾರ್ಯವಿಧಾನ (ಎಸ್‌ಒಪಿ)ದ ಪ್ರಕಾರ ಎರಡನೇ ಮತ್ತು ಮೂರನೇ ಸ್ಥಾನದ ಅಭ್ಯರ್ಥಿಗಳು ಇವಿಎಮ್‌ಗಳ ಪರಿಶೀಲನೆಗಾಗಿ ಪ್ರತಿ ಯಂತ್ರಕ್ಕೆ 47,200 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಚುನಾವಣಾ ಆಯೋಗದ ಎಸ್‌ಒಪಿಯಂತೆ ಇವಿಎಂ ತಯಾರಕ ಕಂಪನಿಗಳಾದ ಬಿಇಎಲ್ ಮತ್ತು ಇಸಿಐಎಲ್ ಪ್ರತಿ ಸೆಟ್‌ಗೆ ‘ತಪಾಸಣೆ ಮತ್ತು ಪರಿಶೀಲನೆ’ಗೆ 40,000 ರೂ.ಶುಲ್ಕ (ಜೊತೆಗೆ ಶೇ.18ರಷ್ಟು ಜಿಎಸ್‌ಟಿ)ವನ್ನು ನಿಗದಿಗೊಳಿಸಿದ್ದಾರೆ. ಇದರ ಜೊತೆಗೆ ಯಂತ್ರಗಳನ್ನು ಸ್ಥಳಾಂತರಿಸಲು ಕೂಲಿ, ಸಿಸಿಟಿವಿ ಕವರೇಜ್, ವಿದ್ಯುತ್ ಶುಲ್ಕ ಇತ್ಯಾದಿ ಆಡಳಿತಾತ್ಮಕ ವೆಚ್ಚಗಳೂ ಸೇರುತ್ತವೆ. ಆದರೆ ಅರ್ಜಿದಾರರಿಗೆ ಆಡಳಿತಾತ್ಮಕ ವೆಚ್ಚಗಳನ್ನು ಮನ್ನಾ ಮಾಡಲು ಆಯೋಗವು ನಿರ್ಧರಿಸಿದೆ. ಅದನ್ನು ಚುನಾವಣಾ ವೆಚ್ಚವೆಂದು ಪರಿಗಣಿಸಲಾಗುವುದು ಹಾಗೂ ರಾಜ್ಯ ಅಥವಾ ಕೇಂದ್ರ ಸರಕಾರ ಅದನ್ನು ಭರಿಸಲಿದೆ.

ಪ್ರತ್ಯೇಕವಾಗಿ ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭಾ ಚುನಾವಣೆಗಳಲ್ಲಿಯ ಅನುಕ್ರಮವಾಗಿ ವೈಎಸ್‌ಆರ್‌ಸಿಪಿ ಮತ್ತು ಬಿಜೆಡಿ ಅಭ್ಯರ್ಥಿಗಳೂ ಇವಿಎಮ್‌ಗಳ ಪರಿಶೀಲನೆಯನ್ನು ಕೋರಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿಯ 26 ಮತಗಟ್ಟೆಗಳಿಗಾಗಿ ಪರಿಶೀಲನೆಯನ್ನು ಕೋರಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News