'ಹಾಗಲ್ಲ, ಹೀಗೆ ಹೇಳಿದ್ದು' ಎಂದು ಆದಿವಾಸಿಗಳ ಕ್ಷಮೆ ಯಾಚಿಸಿದ ಸುಧೀರ್ ಚೌಧರಿ

Update: 2024-02-03 08:22 GMT

ಸುಧೀರ್‌ ಚೌಧರಿ (Photo credit: X/@sudhirchaudhary)

ಹೊಸದಿಲ್ಲಿ : ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರನ್ನು ಈಡಿ ಬಂಧಿಸುತ್ತಿದ್ದಂತೆ, ತಮ್ಮ ಕಾರ್ಯಕ್ರಮದಲ್ಲಿ ಹೇಮಂತ್ ಸೊರೇನ್ ಬಗ್ಗೆ ಮಾತಾಡುವಾಗ ಆದಿವಾಸಿಗಳ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಟ್ಟಿದ್ದ ಆಂಕರ್ ಸುಧೀರ್‌ ಚೌಧರಿ ಕ್ಷಮೆಯಾಚಿಸಿದ್ದಾರೆ.

ಜನವರಿ 31 ರಂದು, ಹೇಮಂತ್ ಸೊರೆನ್ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಭೂ ಹಗರಣ ಪ್ರಕರಣದಲ್ಲಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು. ಈ ಸುದ್ದಿ ಬಗ್ಗೆ ತಮ್ಮ ಕಾರ್ಯಕ್ರಮ ಬ್ಲ್ಯಾಕ್ ಎಂಡ್ ವೈಟ್ ನಲ್ಲಿ ಸುಧೀರ್ ಚೌಧರಿ, 20, 30, 40 ವರ್ಷಗಳ ಹಿಂದೆ ಕಾಡಿನಲ್ಲಿದ್ದ ಆದಿವಾಸಿಗಳಂತೆ ಸೊರೇನ್ ಇಂದು ರಾತ್ರಿ ಜೈಲಿನಲ್ಲಿರಬಹುದು ಎಂದು ವ್ಯಂಗ್ಯವಾಡಿದ್ದರು.

ಸುಧೀರ್‌ ಚೌಧರಿ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದಿವಾಸಿ ಸಂಘಟನೆಗಳು ಅವರ ವಿರುದ್ಧ ಪರಿಶಿಷ್ಟರ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಲು ಒತ್ತಾಯಿಸಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸುಧೀರ್‌ ಚೌಧರಿ ಶನಿವಾರ ತಮ್ಮ x ಖಾತೆಯಲ್ಲಿ ಕ್ಷಮೆ ಕೋರಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪೋಸ್ಟ್‌ ನ ಪೂರ್ಣ ಪಾಠ ಇಲ್ಲಿದೆ.

@ಸುಧೀರ್ ಚೌಧರಿ

ಹೇಮಂತ್ ಸೋರೆನ್ ಅವರ ಬಂಧನದ ಕುರಿತಾದ ನನ್ನ ಕಾರ್ಯಕ್ರಮಕ್ಕಾಗಿ ನನ್ನ ಮೇಲಿನ ಎಲ್ಲಾ ದ್ವೇಷಪೂರಿತ ಪೋಸ್ಟ್‌ಗಳಿಗೆ ಪ್ರತಿಕ್ರಿಯೆಯಾಗಿ ನನ್ನ ಹೇಳಿಕೆ ಇಲ್ಲಿದೆ.

ನನ್ನ ವಿರುದ್ಧ ಆದಿವಾಸಿಗಳನ್ನು ಅವಮಾನಿಸುವ ಆಧಾರರಹಿತ ಆರೋಪಗಳನ್ನು ನೋಡಿ ನನಗೆ ನೋವಾಗಿದೆ. ಹೇಮಂತ್ ಸೋರೆನ್ ಅವರನ್ನು ಟೀಕಿಸುವುದು ಎಂದರೆ ಅದು ಆದಿವಾಸಿಗಳನ್ನು ಟೀಕಿಸಿದ್ದು ಅಥವಾ ಅವಮಾನಿಸಿದ್ದು ಎಂದಾಗುವುದಿಲ್ಲ. ಶ್ರೀಮಂತ ನಾಯಕರು ಬುಡಕಟ್ಟು ಮತಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದರ ಮೇಲೆ ನನ್ನ ಕಾರ್ಯಕ್ರಮವು ಕೇಂದ್ರೀಕೃತವಾಗಿತ್ತು.

ಪಟ್ಟಭದ್ರ ಹಿತಾಸಕ್ತಿಗಳು ಹಂಚಿಕೊಳ್ಳುತ್ತಿರುವ ಕಿರು ವೀಡಿಯೊ ಕ್ಲಿಪ್ ನನ್ನ ಕಾರ್ಯಕ್ರಮದ ಸಂದರ್ಭವನ್ನು ತಪ್ಪುದಾರಿಗೆಳೆಯುವ ಸಂದೇಶವನ್ನು ನೀಡಲು ಬಳಕೆಯಾಗುತ್ತಿದೆ. ನಾನು ಯಾವಾಗಲೂ ಬುಡಕಟ್ಟು ಜನಾಂಗದವರನ್ನು ಬೆಂಬಲಿಸುತ್ತೇನೆ ಮತ್ತು ಗೌರವಿಸುತ್ತೇನೆ ಮತ್ತು ಅವರು ಯಾವಾಗಲೂ ನನಗೆ ಮತ್ತು ನನ್ನ ಕಾರ್ಯಕ್ರಮಗಳಿಗೆ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

Twitter (X) ಖಾತೆಯನ್ನು ಹೊಂದಿರುವ ಎಲ್ಲರಿಗೂ ನಾನು ಉತ್ತರಿಸಬೇಕಾಗಿಲ್ಲ. ಆದರೆ ನನ್ನ ಆದಿವಾಸಿ ಸಹೋದರ ಸಹೋದರಿಯರಿಗೆ ನನ್ನ ಬಗ್ಗೆ ವಿವರಿಸುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ನಾನು ಉದ್ದೇಶಪೂರ್ವಕವಲ್ಲದೇ ಅವರ ಭಾವನೆಗಳನ್ನು ನೋಯಿಸಿದ್ದರೆ, ನಾನು ಅವರಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ.”

ಸುಧೀರ್ ಚೌಧರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News