ಜೈಲಿನಲ್ಲಿ ಕೇಜ್ರಿವಾಲ್‌ರನ್ನು ಭೇಟಿಯಾದ ಸುನೀತಾ, ಆತಿಶಿ
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ಪತ್ನಿ ಸುನೀತಾ ಮತ್ತು ದಿಲ್ಲಿ ಸರಕಾರದ ಸಚಿವೆ ಆತಿಶಿ ಸೋಮವಾರ ತಿಹಾರ್ ಜೈಲಿನಲ್ಲಿ ಭೇಟಿಯಾದರು.
ಇದಕ್ಕೂ ಮೊದಲು, ಗಂಡನನ್ನು ಭೇಟಿಯಾಗಲು ಅನುಮತಿ ಕೋರಿ ಸುನೀತಾ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ತಿಹಾರ್ ಜೈಲಿನ ಆಡಳಿತವು ತಿರಸ್ಕರಿಸಿತ್ತು. ಆದರೆ, ಸೋಮವಾರ ಅವರನ್ನು ಭೇಟಿಯಾಗಲು ಅನುಮತಿ ನೀಡಿತು ಎಂದು ಆಮ್ ಆದ್ಮಿ ಪಕ್ಷ (ಆಪ್) ಹೇಳಿದೆ.
‘‘ಜೈಲಿನಲ್ಲಿ ಕೇಜ್ರಿವಾಲ್‌ರನ್ನು ಭೇಟಿಯಾಗಿ, ನೀವು ಹೇಗಿದ್ದೀರಿ ಎಂದು ನಾವು ಕೇಳಿದಾಗ, ಅವರು ಪ್ರತಿಯಾಗಿ ಶಾಲಾ ಮಕ್ಕಳಿಗೆ ಪುಸ್ತಕಗಳು ಸಿಗುತ್ತಿವೆಯೇ ಮತ್ತು ಮೊಹಲ್ಲಾ ಕ್ಲಿನಿಕ್‌ಗಳಿಗೆ ಔಷಧಿಗಳನ್ನು ಪೂರೈಸಲಾಗುತ್ತಿದ್ದೆಯೇ ಎಂದು ಪ್ರಶ್ನಿಸಿದರು’’ ಎಂದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆತಿಶಿ ಹೇಳಿದರು.
ಮುಖ್ಯಮಂತ್ರಿಯನ್ನು ಭೇಟಿಯಾಗಲು ಜೈಲು ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂದು ರವಿವಾರ ಆಪ್ ಹೇಳಿತ್ತು. ಆದರೆ, ಈ ಆರೋಪವನ್ನು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಮಂಗಳವಾರ ಕೇಜ್ರಿವಾಲ್‌ರನ್ನು ಭೇಟಿಯಾಗಲಿದ್ದಾರೆ.