ಜೈಲುಗಳಲ್ಲಿ ಜಾತಿ ತಾರತಮ್ಯ | ನಾಳೆ ಸುಪ್ರೀಂ ಕೋರ್ಟ್ ತೀರ್ಪು
ಹೊಸದಿಲ್ಲಿ : ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಘೋಷಿಸಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಅರ್ಜಿಯ ಮೇಲಿನ ತೀರ್ಪನ್ನು ಘೋಷಿಸಲಿದೆ ಎಂದು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
ಈ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳ ಸೇರಿದಂತೆ 11 ರಾಜ್ಯಗಳು ಹಾಗೂ ಕೇಂದ್ರದಿಂದ ಈ ವರ್ಷ ಜನವರಿಯಲ್ಲಿ ಪ್ರತಿಕ್ರಿಯೆ ಕೋರಿತ್ತು.
ಈ ರಾಜ್ಯಗಳ ಜೈಲು ಕೈಪಿಡಿಗಳು ತಮ್ಮ ಜೈಲುಗಳಲ್ಲಿನ ಕೆಲಸದ ಹಂಚಿಕೆಯಲ್ಲಿ ತಾರತಮ್ಯವನ್ನು ತೋರಿಸುತ್ತವೆ. ಕೈದಿಗಳ ಜಾತಿಯ ಆಧಾರದಲ್ಲಿ ಅವರಿಗೆ ಜೈಲಿನಲ್ಲಿ ಸ್ಥಳವನ್ನು ನೀಡಲಾಗುತ್ತದೆ ಎಂದು ದೂರುದಾರ ಪರ ವಕೀಲರ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿತ್ತು.
ಕೇಂದ್ರ ಗೃಹ ಸಚಿವಾಲಯ ರೂಪಿಸಿರುವ ಮಾದರಿ ಜೈಲು ಕೈಪಿಡಿಗೆ ಅನುಗುಣವಾಗಿ ರಾಜ್ಯ ಜೈಲುಗಳ ಕೈಪಿಡಿಯನ್ನು ತಿದ್ದುಪಡಿ ಮಾಡಲಾಗಿದ್ದರೂ ಜೈಲುಗಳಲ್ಲಿ ಜಾತಿ ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.