ಅರ್ಜುನ್ ಸಾವನ್ನು ತಮ್ಮ ಖ್ಯಾತಿಗಾಗಿ ಲಾರಿ ಮಾಲಕ ಬಳಸಿಕೊಳ್ಳುತ್ತಿದ್ದಾರೆ : ಅರ್ಜುನ್ ಕುಟುಂಬದ ಸದಸ್ಯರ ಆರೋಪ

Update: 2024-10-02 16:52 GMT

ಅರ್ಜುನ್ | PC : X

ಕೋಯಿಕ್ಕೋಡ್: ಅರ್ಜುನ್ ಸಾವನ್ನು ಲಾರಿ ಮಾಲಕ ಮನಾಫ್ ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅರ್ಜುನ್ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಒಂದು ವೇಳೆ ನಮ್ಮ ಕುಟುಂಬದ ದುಃಖದ ಲಾಭವನ್ನು ಪಡೆಯುವುದನ್ನೇನಾದರೂ ಮುಂದುವರಿಸಿದರೆ, ಕಾನೂನು ಕ್ರಮದ ಆಯ್ಕೆಯನ್ನು ಪರಿಶೀಲಿಸಲಾಗುವುದು ಎಂದೂ ಮನಾಫ್ ಗೆ ಅರ್ಜುನ್ ಕುಟುಂಬದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ, ಲಾರಿ ಮಾಲಕ ಮನಾಫ್, ನನಗೆ ನನ್ನ ಲಾರಿ ಬೇಡ; ಬದಲಿಗೆ ಅರ್ಜುನ್ ನ ಕಳೇಬರವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಿದರೆ ಸಾಕು ಎಂದು ಭಾವನಾತ್ಮಕ ಮನವಿ ಮಾಡಿದ್ದರು. ಹೀಗಾಗಿ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮಾನವೀಯತೆ ಮುಖ ಎಂಬಂತೆ ಕೊಂಡಾಡಲಾಗಿತ್ತು. ಆದರೆ, ಈಗಲೂ ಮನಾಫ್ ನಮ್ಮ ಕುಟುಂಬದ ಭಾವನೆಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅರ್ಜುನ್ ಭಾವಚಿತ್ರವನ್ನು ಹೊಂದಿರುವ ತಮ್ಮ ಯೂಟ್ಯೂಬ್ ವಾಹಿನಿಗೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಅರ್ಜುನ್ ಕುಟುಂಬದ ಸದಸ್ಯರು ಆರೋಪಿಸುತ್ತಿದ್ದಾರೆ.

“ಮೊದಲ ಹಂತದ ಕಾರ್ಯಾಚರಣೆಯ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮನಾಫ್ ಮೇಲಿನ ಗೌರವದಿಂದ ನಾವು ಈ ವಿಷಯವನ್ನು ಇಲ್ಲಿಯವರೆಗೆ ಪ್ರಸ್ತಾಪಿಸಿರಲಿಲ್ಲ. ಆದರೆ, ಅವು ನಮ್ಮ ನಿಯಂತ್ರಣವನ್ನು ಕಳೆದುಕೊಂಡಿದ್ದು, ವಿಶೇಷವಾಗಿ ಸಾಮಾಜಿಕ ಮಾಧ್ಯಯಮಗಳಲ್ಲಿ ಅವರ ಬೆಂಬಲಿಗರು ನಮಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಅರ್ಜುನ್ ಕುಟುಂಬದ ಸದಸ್ಯರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಶಿರೂರು ಭೂಕುಸಿತದಡಿ ಸಿಲುಕಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಮೃತದೇಹ ಹಾಗೂ ಲಾರಿಯನ್ನು 72 ದಿನಗಳ ಶೋಧ ಕಾರ್ಯಾಚರಣೆಯ ನಂತರ, ಗಂಗಾವಳಿ ನದಿಯಲ್ಲಿ ಪತ್ತೆ ಹಚ್ಚಲಾಗಿತ್ತು. ಇದರ ಬೆನ್ನಿಗೇ, ಅರ್ಜುನ್ ಕುಟುಂಬದ ಸದಸ್ಯರು ಲಾರಿ ಮಾಲಕ ತಮ್ಮ ದುಃಖವನ್ನು ಸ್ವಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

►ಆರೋಪ ನಿರಾಕರಿಸಿದ ಮನಾಫ್

ಆದರೆ, ಅರ್ಜುನ್ ಕುಟುಂಬದ ಸದಸ್ಯರು ಮಾಡಿರುವ ಆರೋಪವನ್ನು ನಿರಾಕರಿಸಿರುವ ಲಾರಿ ಮಾಲಕ ಮನಾಫ್, ನಾನೇನಾದರೂ ತಪ್ಪು ಮಾಡಿದ್ದರೆ, ಜನರು ನನ್ನನ್ನು ಕಲ್ಲಲ್ಲಿ ಹೊಡೆಯಲಿ ಎಂದು ಹೇಳಿದ್ದಾರೆ.

ನನ್ನನ್ನು ಅಪರಾಧಿಯನ್ನಾಗಿಸಲು ಯಾರು ಏನೇ ಪ್ರಯತ್ನ ಪಟ್ಟರೂ, ನಾನು ಮಾಡಿದ್ದು ಎಂದಿಗೂ ಉಳಿಯಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಕೆಲವರು ಅರ್ಜುನ್ ಕುಟುಂಬವನ್ನು ದಾರಿ ತಪ್ಪಿಸಿದ್ದಾರೆ. ನಾನು ಸಮಸ್ಯೆಯನ್ನು ರಾಜಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧನಿದ್ದೇನೆ. ಏನಾದರೂ ಆಗಲಿ, ನಾನು ಲಾರಿಗೆ ಅರ್ಜುನ್ ಹೆಸರಿಡುತ್ತೇನೆ. ನನಗೆ ಅರ್ಜುನ್ ಕುಟುಂಬದ ವಿರುದ್ಧ ಯಾವುದೇ ಹಗೆತನವಿಲ್ಲ” ಎಂದು ಮನಾಫ್ ಹೇಳಿದ್ದಾರೆ.

“ನಾನು ಯಾರಿಂದಲೂ ಹಣ ಸ್ವೀಕರಿಸಿಲ್ಲ. ಅರ್ಜುನ್ ಮೃತದೇಹವನ್ನು ಪತ್ತೆ ಮಾಡುವುದಕ್ಕೂ ಮುನ್ನ ಅವರು ಈ ಆರೋಪ ಮಾಡಬಹುದಾಗಿತ್ತು. ಅವರೆಲ್ಲ ನನ್ನನ್ನು ನಿರಾಕರಿಸಿದರೂ, ಅವರೆಲ್ಲ ನನ್ನ ಕುಟುಂಬದ ಸದಸ್ಯರು. ಇದರ ಹಿಂದೆ ಕೆಲವರು ಇದ್ದಾರೆ. ಆದರೆ, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ಅವರು ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News