ಬಾಂಗ್ಲಾದೇಶದ ಮಧ್ಯಂತರ ಸರಕಾರದ ಅಧಿಕಾರಿಯ ಫೇಸ್‌ಬುಕ್ ಪೋಸ್ಟ್‌ಗೆ ಭಾರತದ ಪ್ರತಿಭಟನೆ

Update: 2024-12-21 11:25 GMT

ಮಹ್ಫುಜ್ ಆಲಂ | PC : Mahfuj Alam/Facebook.

ಹೊಸದಿಲ್ಲಿ: ಬಾಂಗ್ಲಾದೇಶದ ಮಧ್ಯಂತರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರ ವಿಶೇಷ ಸಹಾಯಕ ಮಹ್ಫುಜ್ ಆಲಂ ಅವರ ಫೇಸ್‌ಬುಕ್ ಪೋಸ್ಟ್‌ನ್ನು ಭಾರತವು ತೀವ್ರವಾಗಿ ಪ್ರತಿಭಟಿಸಿದೆ. ಈಗ ಅಳಿಸಲಾಗಿರುವ ಪೋಸ್ಟ್‌ನಲ್ಲಿ ಆಲಂ ಬಾಂಗ್ಲಾದೇಶದಲ್ಲಿ ವಿಲೀನಗೊಳಿಸಲು ಪೂರ್ವ ಮತ್ತು ಈಶಾನ್ಯ ಭಾರತದ ಭಾಗಗಳನ್ನು ಪ್ರತ್ಯೇಕಿಸುವ ಸಲಹೆಯನ್ನು ನೀಡಿದ್ದರು.

ಶುಕ್ರವಾರ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು,‘ಈ ವಿಷಯದಲ್ಲಿ ನಾವು ನಮ್ಮ ಬಲವಾದ ಪ್ರತಿಭಟನೆಯನ್ನು ಬಾಂಗ್ಲಾದೇಶಕ್ಕೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು. ಪೋಸ್ಟ್‌ ಅನ್ನು ಈಗ ಅಳಿಸಿರುವುದನ್ನು ಅವರು ಒಪ್ಪಿಕೊಂಡರಾದರೂ ಜವಾಬ್ದಾರಿಯುತ ಸಾರ್ವಜನಿಕ ಹೇಳಿಕೆಗಳ ಪ್ರಾಮುಖ್ಯವನ್ನು ಒತ್ತಿ ಹೇಳಿದರು.

ಬಂಗಾಳಿ ಭಾಷೆಯಲ್ಲಿನ ಆಲಂ ಅವರ ಪೋಸ್ಟ್‌ನ್ನು ಡಿ.16ರಂದು ಬಾಂಗ್ಲಾದೇಶದ ವಿಮೋಚನಾ ಯುದ್ಧದ ವರ್ಷಾಚರಣೆ ಸಂದರ್ಭದಲ್ಲಿ ಶೇರ್ ಮಾಡಿಕೊಳ್ಳಲಾಗಿತ್ತು. ದೇಶದ ಭೌಗೋಳಿಕ ವಿವಾದಗಳು ಪರಿಹಾರಗೊಳ್ಳದೆ ಬಾಂಗ್ಲಾದೇಶದ ವಿಮೋಚನಾ ಹೋರಾಟವು ಅಪೂರ್ಣವಾಗಿದೆ ಎಂದು ಆಲಂ ತನ್ನ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ್ದರು.

1975 ಮತ್ತು 2024ರ ದಂಗೆಗಳು ‘ಭಾರತದ ಅವಲಂಬನೆ ಮತ್ತು ಪ್ರಾಬಲ್ಯ’ದಿಂದ ಬಾಂಗಾದೇಶವನ್ನು ಮುಕ್ತಗೊಳಿಸಲು ಅಗತ್ಯ ಕ್ರಮಗಳಾಗಿದ್ದವು ಎಂದೂ ಆಲಂ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು.

ವಿದ್ಯಾರ್ಥಿಗಳ ಆಂದೋಲನದ ಮೂಲಕ ಮಾಜಿ ಪ್ರಧಾನಿ ಶೇಖ್ ಹಸೀನಾರ ಪದಚ್ಯುತಿಯ ಬಳಿಕ ಬಾಂಗ್ಲಾದೇಶದೊಂದಿನ ಭಾರತದ ಸಂಬಂಧವು ಹದಗೆಟ್ಟಿದೆ. ತನ್ನ ಅಧಿಕಾರಾವಧಿಯಲ್ಲಿ ಭಾರತದ ಪರವಾಗಿದ್ದರು ಎಂದು ಪರಿಗಣಿಸಲಾಗಿದ್ದ ಹಸೀನಾ ಪ್ರತಿಭಟನಾಕಾರರು ಢಾಕಾದಲ್ಲಿನ ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದಂತೆ ಆ.5ರಂದು ಭಾರತಕ್ಕೆ ಪರಾರಿಯಾಗಿದ್ದು,ಆಗಿನಿಂದ ಇಲ್ಲಿಯೇ ವಾಸವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News