ವಯನಾಡ್ ನಿಂದ ಪ್ರಿಯಾಂಕಾ ಗಾಂಧಿ ಗೆಲುವು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಯಿಂದ ಹೈಕೋರ್ಟ್ ಗೆ ಅರ್ಜಿ
ಕೇರಳ: ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗೆಲುವನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ನವ್ಯಾ ಹರಿದಾಸ್ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಿಯಾಂಕಾ ಅವರು 6,22,338 ಮತಗಳನ್ನು ಪಡೆಯುವ ಮೂಲಕ ಭಾರೀ ಅಂತರದ ಗೆಲುವನ್ನು ಸಾಧಿಸಿದ್ದರು. ಹರಿದಾಸ್ 1,09,939 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ʼಪ್ರಿಯಾಂಕ ಗಾಂಧಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಮತ್ತು ಕುಟುಂಬದ ಒಡೆತನದ ಆಸ್ತಿಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಮತದಾರರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ, ಇದು ಚುನಾವಣೆಯ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆʼ ಎಂದು ನವ್ಯಾ ಹರಿದಾಸ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿಯ ಸಲ್ಲಿಕೆ ಬಗ್ಗೆ ದೃಢಪಡಿಸಿದ ಹರಿದಾಸ್, 2025ರ ಜನವರಿಯಲ್ಲಿ ಈ ಕುರಿತ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹರಿದಾಸ್ ಪರ ವಕೀಲ ಹರಿಕುಮಾರ್ ಜಿ ನಾಯರ್ ಕೋರ್ಟ್ ನಲ್ಲಿ ವಾದಿಸಲಿದ್ದಾರೆ.