ತರಗತಿಯಲ್ಲಿ ಹಾವು ಕಡಿತಕ್ಕೊಳಗಾದ ಬಾಲಕಿ: ತನಿಖೆಗೆ ಆದೇಶಿಸಿದ ಕೇರಳ ಸರಕಾರ
Update: 2024-12-21 08:27 GMT
ತಿರುವನಂತಪುರಂ: ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯ ಕೋಣೆಯಲ್ಲಿ ಹಾವು ಕಚ್ಚಿರುವ ಘಟನೆ ನೆಯ್ಯಾಟ್ಟಿಂಕರದ ಬಳಿ ನಡೆದಿದ್ದು, ಈ ಘಟನೆಯ ಕುರಿತು ಶನಿವಾರ ಕೇರಳ ಸರಕಾರ ತನಿಖೆಗೆ ಆದೇಶಿಸಿದೆ.
ಶುಕ್ರವಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆಗೊಂಡಿದ್ದ ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಏಳನೆ ತರಗತಿಯ ನೇಹಾ ಎಂಬ ಬಾಲಕಿಗೆ ವಿಷಪೂರಿತ ಹಾವೊಂದು ಕಚ್ಚಿದೆ. ಕೂಡಲೇ ಆಕೆಯನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿಯೀಗ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಈ ಸಂಬಂಧ ಶನಿವಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಸಾಮಾನ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ, ಘಟನೆಯ ಕುರಿತು ತನಿಖೆ ನಡೆಸಿ, ಈ ಕುರಿತು ಆದಷ್ಟು ಶೀಘ್ರವಾಗಿ ವರದಿಯೊಂದನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.