ಪೆಗಾಸಸ್ ಬಳಸಿ ವಾಟ್ಸಪ್ ಹ್ಯಾಕಿಂಗ್ ಗೆ ಇಸ್ರೇಲ್ ಮೂಲದ NSO ಹೊಣೆ : ಯುಎಸ್ ನ್ಯಾಯಾಲಯ
ಕ್ಯಾಲಿಫೋರ್ನಿಯಾ: ಪೆಗಾಸಸ್ ಬಳಸಿ ವಾಟ್ಸಪ್ ಹ್ಯಾಕಿಂಗ್ ಗೆ ಇಸ್ರೇಲ್ ಮೂಲದ ಎನ್ಎಸ್ಒ(NSO) ಸಂಸ್ಥೆ ಹೊಣೆ ಎಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದೆ.
ಇಸ್ರೇಲ್ ನ ಸಂಸ್ಥೆಯು ಅನಧಿಕೃತ ಕಣ್ಗಾವಲಿಗೆ ಅವಕಾಶ ನೀಡುವ ಗೂಢಚಾರ ಸಾಫ್ಟ್ವೇರ್ ಅನ್ನು ಸ್ಥಾಪಿಸಲು ಮೆಸೇಜಿಂಗ್ ಅಪ್ಲಿಕೇಶನ್ ನಲ್ಲಿನ ದೋಷವನ್ನು ಬಳಸಿಕೊಂಡಿದೆ ಎಂದು ಆರೋಪಿಸಿ ಮೆಟಾ ಮೊಕದ್ದಮೆ ಹೂಡಿತ್ತು.
ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ಜಿಲ್ಲಾ ನ್ಯಾಯಾಧೀಶ ಫಿಲ್ಲಿಸ್ ಹ್ಯಾಮಿಲ್ಟನ್, ಹ್ಯಾಕಿಂಗ್ ಮತ್ತು ಒಪ್ಪಂದದ ಉಲ್ಲಂಘನೆಗೆ NSOಯನ್ನು ಹೊಣೆ ಮಾಡಿ ತೀರ್ಪು ನೀಡಿದ್ದಾರೆ.
ಆದರೆ, ಈ ಬಗ್ಗೆ NSO ಗ್ರೂಪ್ ತಕ್ಷಣ ಯಾವುದೇ ಪ್ರತಿಕ್ರಿಯಿಸಲಿಲ್ಲ ಎಂದು ರಾಯಿಟರ್ಸ್ ಸಂಸ್ಥೆ ವರದಿ ಮಾಡಿದೆ. ಈ ತೀರ್ಪನ್ನು ಬರಮಾಡಿಕೊಂಡ ವಾಟ್ಸಾಪ್ ಮುಖ್ಯಸ್ಥ ಕ್ಯಾಥ್ಕಾರ್ಟ್ ಈ ತೀರ್ಪು ಗೌಪ್ಯತೆಗೆ ಗೆಲುವು ಎಂದು ಹೇಳಿದ್ದಾರೆ.
"ಸ್ಪೈವೇರ್ ಕಂಪನಿಗಳು ವಿನಾಯಿತಿ ಪಡೆಯಲು ಅಥವಾ ಅವರ ಕಾನೂನುಬಾಹಿರ ಕ್ರಮಗಳಿಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಕ್ರಮ ಬೇಹುಗಾರಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಕಣ್ಗಾವಲು ಕಂಪನಿಗಳು ಗಮನದಲ್ಲಿಟ್ಟುಕೊಳ್ಳಬೇಕು" ಎಂದು ಕ್ಯಾಥ್ಕಾರ್ಟ್ ಹೇಳಿದ್ದಾರೆ.
ಪೆಗಾಸಸ್ ಎಂಬ ಸ್ಪೈವೇರ್ ಅನ್ನು ಅಭಿವೃದ್ಧಿ ಪಡಿಸಿರುವ ಎನ್ಎಸ್ಒ ಅದನ್ನು ಭಾರತ ಸರ್ಕಾರ ಸೇರಿದಂತೆ ವಿಶ್ವದ ವಿವಿಧ ಸರ್ಕಾರಗಳಿಗೆ ಮಾರಾಟ ಮಾಡಿದೆ ಎಂಬ ಆರೋಪ ಸಂಸ್ಥೆಯ ಮೇಲಿದೆ. ಪೆಗಾಸಸ್ ವೈರಸ್ ಅನ್ನು ಭಾರತದ ರಾಜಕಾರಣಿಗಳು ಮತ್ತು ಸಾಮಾಜಿಕ ಹೋರಾಟಗಾರರು ಸೇರಿದಂತೆ ಮೊಬೈಲ್ ಫೋನ್ ಗಳನ್ನು ಹ್ಯಾಕ್ ಮಾಡಲು ಬಳಸಲಾಗಿದೆ ಎಂಬ ಆರೋಪ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧವೂ ಕೇಳಿ ಬಂದಿತ್ತು.
ಮೊಬೈಲ್ ಗಳಲ್ಲಿ ಪೆಗಾಸಸ್ ಸಾಫ್ಟ್ವೇರ್ ಅನ್ನು ಸ್ಥಾಪಿಸಲು ಎನ್ಎಸ್ಒ ಅನುಮತಿಯಿಲ್ಲದೆ WhatsApp ಸರ್ವರ್ಗಳನ್ನು ಪ್ರವೇಶಿಸಿದೆ. ಆ ಮೂಲಕ ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ರಾಜಕಾರಣಿಗಳು ಸೇರಿದಂತೆ 1,400 ಜನರ ಮೇಲೆ ಕಣ್ಗಾವಲು ಇರಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ವಾಟ್ಸಾಪ್ NSO ವಿರುದ್ಧ ಸಲ್ಲಿಸಿದ್ದ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಆದರೆ, ಪೆಗಾಸಸ್ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳು ಅಪರಾಧದ ವಿರುದ್ಧ ಹೋರಾಡಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅದರ ತಂತ್ರಜ್ಞಾನವು ಭಯೋತ್ಪಾದಕರು, ಶಿಶುಕಾಮಿಗಳು ಮತ್ತು ಕಠಿಣ ಅಪರಾಧಿಗಳನ್ನು ಹಿಡಿಯಲು ಸಹಾಯ ಮಾಡುತ್ತದೆ ಎಂದು NSO ವಾದಿಸಿತ್ತು.