ಏಕನಾಥ್ ಶಿಂಧೆ ಕುರಿತ ಹೇಳಿಕೆ ವಿವಾದ | ಕುನಾಲ್ ಕಾಮ್ರಾ ವಿರುದ್ಧ ಎಫ್‌ಐಆರ್ ದಾಖಲು; ಕ್ಷಮೆಯಾಚಿಸುವಂತೆ ಆಗ್ರಹ

ಕಾಮಿಡಿಯನ್ ಕುನಾಲ್ ಕಾಮ್ರಾ (YouTube/Kunal Kamra)
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಶಿವಸೇನೆ ಶಾಸಕ ಮುರ್ಜಿ ಪಟೇಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
"ನಮ್ಮ ಹಿರಿಯ ನಾಯಕನ ಬಗ್ಗೆ ಅವರು ಹೇಳಿದ್ದು ಸ್ವೀಕಾರಾರ್ಹವಲ್ಲ. ಕ್ಲಿಪ್ ನೋಡಿದ ನಂತರ, ನಾನು ನಿನ್ನೆ ರಾತ್ರಿ ಎಂಐಡಿಸಿ ಪೊಲೀಸ್ ಠಾಣೆಗೆ ರಾತ್ರಿ 11 ಗಂಟೆ ಸುಮಾರಿಗೆ ಹೋಗಿದ್ದೆ. ಕುನಾಲ್ ಕಾಮ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ವಿನಂತಿಸಿದೆ", ಎಂದು ಶಾಸಕ ಮುರ್ಜಿ ಪಟೇಲ್ ಹೇಳಿದ್ದಾರೆ.
“ನಾವು MIDC ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಈ ಬಗ್ಗೆ ಪೊಲೀಸರಿಂದ ತಕ್ಷಣದ ಕ್ರಮವನ್ನು ಕೋರಿದ್ದೇವೆ. ಅದರಂತೆ, BNS ನ ಸೆಕ್ಷನ್ 353(1), 353(2), 356(2) ಅಡಿಯಲ್ಲಿ ಎಫ್‌ಐಆರ್ ಕುನಾಲ್ ಕಾಮ್ರಾ ಎರಡು ದಿನಗಳಲ್ಲಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು", ಎಂದು ಶಾಸಕರು ತಿಳಿಸಿದರು.
ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮ ನಡೆದಿದೆ ಎನ್ನಲಾದ, ಮುಂಬೈ ನ ಖಾರ್ ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ನಲ್ಲಿ ಶಿವಸೇನಾ ಕಾರ್ಯಕರ್ತರು ರವಿವಾರ ತಡರಾತ್ರಿ ದಾಂಧಲೆ ನಡೆಸಿ ಧ್ವಂಸ ಮಾಡಿದ್ದರು. ಈ ಬಗ್ಗೆ ಶಿವಸೇನಾ ಕಾರ್ಯಕರ್ತರ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.