ಈಡಿ ದಂಡವನ್ನು ಬಿಸಿಸಿಐ ಭರಿಸುವಂತೆ ಕೋರಿದ ಲಲಿತ್ ಮೋದಿಗೆ 1 ಲಕ್ಷ ರೂ. ದಂಡ ವಿಧಿಸಿದ ಬಾಂಬೆ ಹೈಕೋರ್ಟ್
ಮುಂಬೈ: ತನಗೆ ಜಾರಿ ನಿರ್ದೇಶನಾಲಯ ವಿಧಿಸಿರುವ 10.65 ಕೋಟಿ ರೂ. ದಂಡವನ್ನು ಪಾವತಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿಗೆ ಒಂದು ಲಕ್ಷ ರೂ. ದಂಡ ವಿಧಿಸಿರುವ ಬಾಂಬೆ ಹೈಕೋರ್ಟ್, ಲಲಿತ್ ಮೋದಿಯ ಅರ್ಜಿ ಕ್ಷುಲ್ಲಕ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಅಭಿಪ್ರಾಯ ಪಟ್ಟಿದೆ.
ಮೇ 2018ರಲ್ಲಿ ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಅಡಿ ತಮಗೆ ವಿಧಿಸಿರುವ 10.65 ಕೋಟಿ ರೂ. ದಂಡವನ್ನು ಪಾವತಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮಧ್ಯಂತರ ನಿರ್ದೇಶನ ನೀಡಬೇಕು ಎಂದು ಲಲಿತ್ ಮೋದಿ ನ್ಯಾಯಾಲಯದ ಮೊರೆ ಹೋಗಿದ್ದರು.
ತನಗೆ ಜಾರಿ ನಿರ್ದೇಶನಾಲಯ ದಂಡ ವಿಧಿಸಿದ ಅವಧಿಯಲ್ಲಿ ನಾನು ಬಿಸಿಸಿಐನ ಉಪಾಧ್ಯಕ್ಷನಾಗಿದ್ದೆ ಹಾಗೂ ಬಿಸಿಸಿಐನ ಉಪ ಸಮಿತಿಯಾದ ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷನಾಗಿ ನೇಮಕಗೊಂಡಿದ್ದೆ. ಬಿಸಿಸಿಐ ಬೈಲಾಗಳ ಪ್ರಕಾರ, ಬಿಸಿಸಿಐ ನನಗೆ ರಕ್ಷಣೆ ನೀಡಬೇಕು ಎಂದು ಲಲಿತ್ ಮೋದಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಆದರೆ, ಸಾಂವಿಧಾನಿಕ ನಿಯಮಗಳ ಪ್ರಕಾರ, ಬಿಸಿಸಿಐ ಪ್ರಭುತ್ವದ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ ಎಂದು 2005ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾ. ಎಂ.ಎಸ್.ಸೋನಕ್ ಹಾಗೂ ನ್ಯಾ. ಜಿತೇಂದ್ರ ಜೈನ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು, ಸುಪ್ರೀಂ ಕೋರ್ಟ್ ನಿಂದ ಸ್ಪಷ್ಟ ನಿರ್ದೇಶನವಿದ್ದರೂ, 2018ರಲ್ಲಿ ಲಲಿತ್ ಮೋದಿ ಅರ್ಜಿ ಸಲ್ಲಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು.
“ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ದಂಡ ವಿಧಿಸಿರುವ ಹಿನ್ನೆಲೆಯಲ್ಲಿ ನಷ್ಟ ಪರಿಹಾರ ಕೋರಿ ಲಲಿತ್ ಮೋದಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಅವರು ಯಾವುದೇ ಸಾರ್ವಜನಿಕ ಸೇವೆಯಲ್ಲಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ, ಬಿಸಿಸಿಐಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಹೇಳಿತು.
“ಈ ಅರ್ಜಿಯು ಕ್ಷುಲ್ಲಕ ಮತ್ತು ದುರುದ್ದೇಶಪೂರಿತವಾಗಿದ್ದು, ಅದರಂತೆ ಈ ಅರ್ಜಿಯನ್ನು ದಂಡ ವಿಧಿಸುವುದರೊಂದಿಗೆ ವಜಾಗೊಳಿಸಲಾಗುತ್ತಿದೆ” ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಲಾಗಿದೆ.