ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ: ಅಮಿತ್ ಶಾ ಭಾಗವಹಿಸುವ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಘೋಷಿಸಿದ ಗುಜರಾತ್ ಬಾರ್ ಕೌನ್ಸಿಲ್ ಸದಸ್ಯ
ಅಹಮದಾಬಾದ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆಗೆ ಆಕ್ಷೇಪಿಸಿ ಗುಜರಾತ್ ಬಾರ್ ಕೌನ್ಸಿಲ್ (ಬಿಸಿಜಿ) ಸದಸ್ಯ ಪರೇಶ್ ವಘೇಲಾ ಅವರು ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಸಾರ್ವಜನಿಕ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.
ಗುಜರಾತ್ ಬಾರ್ ಕೌನ್ಸಿಲ್ ಡಿಸೆಂಬರ್ 30ರಂದು ಅಹಮದಾಬಾದ್ ನ ವಿಜ್ಞಾನ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಅಮಿತ್ ಶಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಕಾರ್ಯಕ್ರಮದಲ್ಲಿ 6,000 ನೂತನ ವಕೀಲರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದಕ್ಕಾಗಿ ಅಮಿತ್ ಶಾ ಕ್ಷಮೆಯಾಚಿಸದಿದ್ದರೆ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಗುಜರಾತ್ ಬಾರ್ ಕೌನ್ಸಿಲ್ ನ ಸದಸ್ಯರಾದ ಪರೇಶ್ ವಘೇಲಾ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಪರೇಶ್ ವಘೇಲಾ, ಯಾರ ನಾಯಕತ್ವದಲ್ಲಿ ಸಂವಿಧಾನವನ್ನು ರೂಪಿಸಲಾಗಿದೆಯೋ ಅಂತಹ ವ್ಯಕ್ತಿಯನ್ನು ನೀವು ಅವಮಾನಿಸಿದರೆ, ಮೂರು ದಿನಗಳವರೆಗೆ ಈ ಬಗ್ಗೆ ನೀವು ಕ್ಷಮೆಯಾಚಿಸದಿದ್ದರೆ, ನೀವು ಭಾಗವಹಿಸುವ ಕಾರ್ಯಕ್ರಮಕ್ಕೆ ನಾವ್ಯಾಕೆ ಹಾಜರಾಗಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗುಜರಾತ್ ನ ಬಾರ್ ಕೌನ್ಸಿಲ್ ಅಧ್ಯಕ್ಷ ಜೆ ಜೆ ಪಟೇಲ್, ಪರೇಶ್ ವಘೇಲಾ ಅವರನ್ನೇ ಟೀಕಿಸಿದ್ದು, ರಾಜಕೀಯೇತರ ಕಾರ್ಯಕ್ರಮದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.