ಪ್ರತಿಭಟನೆ, ಜಟಾಪಟಿ, ಪೊಲೀಸ್ ದೂರು: ಸಂಸತ್ತಿನ ಚಳಿಗಾಲದ ಅಧಿವೇಶನದ ಮುಖ್ಯಾಂಶಗಳು
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಶುಕ್ರವಾರ ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ. ಈ ಬಾರಿಯ ಅಧಿವೇಶನವು ಪ್ರತಿಭಟನೆ, ಜಟಾಪಟಿ, ಆರೋಪ- ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ.
ಅಡೆತಡೆಗಳ ಹೊರತಾಗಿಯೂ, ಲೋಕಸಭೆಯಲ್ಲಿ ʼಒಂದು ರಾಷ್ಟ್ರ, ಒಂದು ಚುನಾವಣೆʼ ಮಸೂದೆಗಳನ್ನು ಮಂಡಿಸಲಾಗಿದೆ. ಮಸೂದೆಯನ್ನು ಪರಿಶೀಲನೆಗೆ ಜಂಟಿ ಸಂಸದೀಯ ಸಮಿತಿಗೆ ವರ್ಗಾಯಿಸಲಾಗಿದೆ. ಸಂವಿಧಾನ ಅಂಗೀಕಾರದ 75ನೇ ವರ್ಷಾಚರಣೆ ಹಿನ್ನೆಲೆ ಸದನದಲ್ಲಿ ಸಂವಿಧಾನದ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಲಾಗಿದೆ. ಅಧಿವೇಶನವು ತನ್ನ ನಿಗದಿತ ಸಮಯದ ಅರ್ಧದಷ್ಟು ಅವಧಿಗೆ ನಡೆದಿದೆ. ಲೋಕಸಭೆಯು ನಿಗದಿತ ಅವಧಿಯ 57% ಮತ್ತು ರಾಜ್ಯಸಭೆಯಲ್ಲಿ 43% ದಷ್ಟು ಅವಧಿಗೆ ಕಲಾಪ ನಡೆದಿದೆ.
ಮಣಿಪುರ ಹಿಂಸಾಚಾರ, ಅದಾನಿ ಲಂಚ ಪ್ರಕರಣ ಮತ್ತು ಉತ್ತರ ಪ್ರದೇಶದ ಸಂಭಲ್ ನಲ್ಲಿ ನಡೆದ ಹಿಂಸಾಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿ, ಫೆಲೆಸ್ತೀನ್, ಬಾಂಗ್ಲಾದೇಶ ಪರ ಬ್ಯಾಗ್ ಧರಿಸಿ ಸಂಸತ್ತಿಗೆ ಬಂದು ಗಮನ ಸೆಳೆದಿದ್ದರು.
ರಾಜ್ಯಸಭೆಯಲ್ಲಿ ಚರ್ಚೆಯ ವೇಳೆ ಉತ್ತರ ನೀಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವುದು ಕೋಲಾಹಲಕ್ಕೆ ಕಾರಣವಾಗಿತ್ತು. ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಡಿಸೆಂಬರ್ 19ರ ಗುರುವಾರ ಸಂಸತ್ ಭವನದ ಮುಖ್ಯ ದ್ವಾರವಾದ ಮಕರ ದ್ವಾರದಲ್ಲಿ ಪ್ರತಿಪಕ್ಷಗಳು ಮತ್ತು ಆಡಳಿತ ಸಂಸದರ ನಡುವೆ ಮಾತಿನ ಚಕಮಕಿ, ಜಟಾಪಟಿ ನಡೆದಿತ್ತು. ರಾಹುಲ್ ಗಾಂಧಿ ತಳ್ಳಿದ ಕಾರಣದಿಂದ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಬಿಜೆಪಿ ಸಂಸದರು ನಮ್ಮನ್ನು ಸಂಸತ್ತಿಗೆ ಪ್ರವೇಶಿಸದಂತೆ ತಡೆದಿದ್ದಾರೆಂದು ರಾಹುಲ್ ಗಾಂಧಿ ಪ್ರತ್ಯಾರೋಪಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪೊಲೀಸರಿಗೆ ದೂರು ನೀಡಿವೆ. ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಸಂಸತ್ತಿನ ಆವರಣದೊಳಗೆ ಎಲ್ಲಿಯೂ ಪ್ರತಿಭಟನೆ ನಡೆಸದಂತೆ ಸ್ಪೀಕರ್ ಓಂ ಬಿರ್ಲಾ ಪ್ರತಿಪಕ್ಷದ ಸಂಸದರಿಗೆ ಸೂಚಿಸಿದ್ದರು. ʼಸಂಸತ್ತಿನ ಯಾವುದೇ ಪ್ರವೇಶದ್ವಾರದಲ್ಲಿ ಪ್ರತಿಭಟನೆಗಳು ನಡೆಸುವುದು ಅನುಚಿತವಾಗಿದೆ. ಈ ನಿಟ್ಟಿನಲ್ಲಿ ನೀವು ನಿಯಮಗಳನ್ನು ಅನುಸರಿಸಬೇಕು. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾನು ಮತ್ತೊಮ್ಮೆ ನಿಮ್ಮನ್ನು ಒತ್ತಾಯಿಸುತ್ತೇನೆʼ ಎಂದು ಹೇಳಿದ್ದರು. ಬಿರ್ಲಾ ಅವರು ಅಧಿವೇಶನದ ಮುಖ್ಯಾಂಶಗಳನ್ನು ಸಂಕ್ಷಿಪ್ತಗೊಳಿಸದೆ ಸದನವನ್ನು ಮುಂದೂಡಿದ್ದಾರೆ.
ಗಮನಾರ್ಹವಾಗಿ, ಸ್ಪೀಕರ್ ಆಯೋಜಿಸಿದ್ದ ಸಾಂಪ್ರದಾಯಿಕ ಚಹಾ ಕೂಟಕ್ಕೆ ಈ ಬಾರಿ ವಿರೋಧ ಪಕ್ಷದ ಯಾವುದೇ ನಾಯಕರು ಹಾಜರಾಗಲಿಲ್ಲ, ಇದರಿಂದಾಗಿ ಸೆಕ್ರೆಟರಿಯೇಟ್ ನಿಂದ ಯಾವುದೇ ಫೋಟೋ ಕೂಡ ಬಿಡುಗಡೆಯಾಗಲಿಲ್ಲ.
ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಗೆ ಹೆಚ್ಚಿನ ಅಡಚಣೆಯಾಗಿದೆ. ರಾಜ್ಯಸಭೆಯಲ್ಲಿ, 19 ದಿನಗಳಲ್ಲಿ 15 ದಿನಗಳು ಪ್ರಶ್ನೋತ್ತರ ಅವಧಿ ನಡೆದಿಲ್ಲ. ಆದರೆ ಲೋಕಸಭೆಯಲ್ಲಿ 20 ದಿನಗಳಲ್ಲಿ 8 ದಿನಗಳಲ್ಲಿ ಮಾತ್ರ 10 ನಿಮಿಷಗಳಿಗಿಂತ ಹೆಚ್ಚು ಕಾಲ ಪ್ರಶ್ನೋತ್ತರ ಅವಧಿ ನಡೆದಿದೆ. ಮೇಲ್ಮನೆಯಲ್ಲಿ ಕೇವಲ ಒಂದು ನಿರ್ಣಯದ ಬಗ್ಗೆ ಚರ್ಚಿಸಲಾಗಿದೆ.
ಇದಲ್ಲದೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ವಿರುದ್ಧ ಪ್ರತಿಪಕ್ಷಗಳು ಪಕ್ಷಪಾತದ ಆರೋಪ ಹೊರಿಸಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು, ಆದರೆ ಈ ನಿರ್ಣಯವನ್ನು ತಿರಸ್ಕರಿಸಲಾಗಿತ್ತು.