43 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತ ಪ್ರಧಾನಿ ಕುವೈಟ್ ಭೇಟಿ

Update: 2024-12-21 04:03 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಕುವೈಟ್ ಗೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಶನಿವಾರ ಪ್ರಯಾಣ ಬೆಳೆಸುವರು. ರಕ್ಷಣೆ ಮತ್ತು ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಈ ಪ್ರವಾಸದಲ್ಲಿ ಉಭಯ ದೇಶಗಳ ಮುಖಂಡರು ಮಾತುಕತೆ ನಡೆಸುವರು. ಭಾರತದ ಪ್ರಧಾನಿಯೊಬ್ಬರು ಕಳೆದ 43 ವರ್ಷಗಳಲ್ಲಿ ಈ ಗಲ್ಫ್ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಕುವೈಟ್ ನ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಮೋದಿ, ಭಾರತೀಯ ಕಾರ್ಮಿಕ ಶಿಬಿರಕ್ಕೆ ಭೇಟಿ ನೀಡುವರು. ಬಳಿಕ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದು, ಗಲ್ಫ್ ಕಪ್ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲೂ ಭಾಗವಹಿಸುವರು.

ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ, ಈಗಾಗಲೇ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಧಾನಿ ಭೇಟಿಯ ಅವಧಿಯಲ್ಲಿ ಕೆಲ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿ ಅರುಣ್ ಕುಮಾರ್ ಚಟರ್ಜಿ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಐತಿಹಾಸಿಕ ಭೇಟಿಯು ಭಾರತ- ಕುವೈಟ್ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯ ತೆರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಹಾಲಿ ಇರುವ ಸಂಬಂಧವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೇ ಭವಿಷ್ಯದ ಸಹಕಾರಕ್ಕಾಗಿ ಹೊಸ ಅವಕಾಶಗಳನ್ನು ಅನಾವರಣ ಮಾಡಲಿದೆ. ಹೆಚ್ಚು ಸದೃಢ ಮತ್ತು ಸಕ್ರಿಯ ಪಾಲುದಾರಿಕೆಯನ್ನು ಭವಿಷ್ಯಕ್ಕಾಗಿ ನಿರ್ಮಿಸುವ ಉಭಯ ದೇಶಗಳ ಮೌಲ್ಯಗಳನ್ನು ದೃಢಪಡಿಸಲಿದೆ ಎಂದು ವಿವರಿಸಿದ್ದಾರೆ.

ಭಾರತ ಮತ್ತು ಗಲ್ಫ್ ಕೋ ಅಪರೇಷನ್ ಕೌನ್ಸಿಲ್ ನಡುವಿನ ಸಂಬಂಧ ಬಲಗೊಳ್ಳಲು ಕೂಡಾ ಇದು ಪೂರಕವಾಗಲಿದೆ ಎಂದು ಆಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News