ಕ್ರೀಡಾ ಸಂಸ್ಥೆಗಳ ನೇತೃತ್ವವನ್ನು ರಾಜಕಾರಣಿಗಳ ಬದಲು ಕ್ರೀಡಾಪಟುಗಳೇ ವಹಿಸಿಕೊಳ್ಳುವಂತಾಗಬೇಕು : ರಾಹುಲ್ ಗಾಂಧಿ

Update: 2024-10-02 13:38 GMT

ರಾಹುಲ್ ಗಾಂಧಿ | PC :PTI 

ಹೊಸದಿಲ್ಲಿ: ಕ್ರೀಡಾ ಸಂಸ್ಥೆಗಳ ನೇತೃತ್ವವನ್ನು ರಾಜಕಾರಣಿಗಳ ಬದಲು ಕ್ರೀಡಾಪಟುಗಳೇ ವಹಿಸಿಕೊಳ್ಳುವಂತಹ ವ್ಯವಸ್ಥೆ ಏರ್ಪಾಡಾಗುವವರೆಗೂ ಕ್ರೀಡೆಯಲ್ಲಿ ಭಾರತ ತನ್ನ ನೈಜ ಸಾಮರ್ಥ್ಯವನ್ನು ಗಳಿಸಲು ಸಾಧ್ಯಗವಾಗುವುದಿಲ್ಲ ಎಂದು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ದುಡ್ಡಿಲ್ಲದಿದ್ದರೆ, ಕ್ರೀಡೆ ಇಲ್ಲ” ಎಂಬಂಥ ಪರಿಸ್ಥಿತಿ ಭಾರತೀಯ ಕ್ರೀಡಾಪಟುಗಳಿಗಿದೆ. ಹರ್ಯಾಣ ಮತ್ತು ದೇಶಾದ್ಯಂತ ಇರುವ ಕ್ರೀಡಾಪಟುಗಳ ಗುಂಪುಗಳನ್ನು ಭೇಟಿ ಮಾಡಿ, ಅವರ ಸಮಸ್ಯೆಯನ್ನು ಆಲಿಸಿದೆ” ಎಂದು ಬರೆದುಕೊಂಡಿದ್ದಾರೆ.

ಚುನಾವಣಾ ರಾಜ್ಯವಾದ ಹರ್ಯಾಣದಲ್ಲಿ ತಾವು ಆಟಗಾರರೊಂದಿಗೆ ನಡೆಸಿರುವ ಮಾತುಕತೆಯ ಏಳು ನಿಮಿಷದ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.

“ಕ್ರೀಡಾ ಸಂಸ್ಥೆಗಳ ನೇತೃತ್ವವನ್ನು ರಾಜಕಾರಣಿಗಳ ಬದಲು ಕ್ರೀಡಾಪಟುಗಳೇ ವಹಿಸಿಕೊಳ್ಳುವಂತಹ ವ್ಯವಸ್ಥೆಯನ್ನು ನಿರ್ಮಿಸಿ, ಅವರಿಗೆ ನೇರವಾಗಿ ನೆರವು ನೀಡುವವರೆಗೂ ಭಾರತ ತನ್ನ ನೈಜ ಸಾಮರ್ಥ್ಯವನ್ನು ಗಳಿಸಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

“ಭಾರತದಲ್ಲಿ ಅಪಾರ ಪ್ರಮಾಣದ ಪ್ರತಿಭೆಯಿದೆ. ಕೇವಲ ಪಾರದರ್ಶಕತೆ, ನ್ಯಾಯಪರತೆ ಹಾಗೂ ಎಲ್ಲ ಅಗತ್ಯ ಸೌಲಭ್ಯಗಳಿಗೆ ಪ್ರವೇಶ ದೊರೆಯುವುದನ್ನು ಖಾತರಿಪಡಿಸಿದಾಗ ಮಾತ್ರ ಭರವಸೆಯ ಆಟಗಾರರು ಸಮಾನವಾಗಿ ಅದರ ಲಾಭ ಪಡೆಯಲಿದ್ದಾರೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ರಾಹುಲ್ ಗಾಂಧಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಕ್ರೀಡಾ ಸಂಸ್ಥೆಗಳ ನೇತೃತ್ವವನ್ನು ರಾಜಕಾರಣಿಗಳ ಬದಲು ಕ್ರೀಡಾಪಟುಗಳೇ ವಹಿಸಿಕೊಂಡರೆ, ಅದರಿಂದ ಆಟಗಾರರಿಗೆ ನೆರವಾಗಲಿದೆಯೆ ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ, ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಆಟಗಾರರು ಸಮ್ಮತಿ ಸೂಚಿಸಿರುವುದನ್ನು ಕಾಣಬಹುದಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News