ಎರಡು ತಿಂಗಳೊಳಗೆ 8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ
ಹೊಸದಿಲ್ಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಒಳಪಡದ, ಇಶ್ರಮ್ (eShram) ಪೋರ್ಟಲ್ ನಲ್ಲಿ ನೋಂದಾಯಿಸಲಾದ ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಎರಡು ತಿಂಗಳೊಳಗೆ ಪಡಿತರ ಚೀಟಿಗಳನ್ನು ಒದಗಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ.
ಎಲ್ಲಾ ಅಸಂಘಟಿತ ಕಾರ್ಮಿಕರ ಕೇಂದ್ರೀಕೃತ ದತ್ತಾಂಶಗಳನ್ನು ಹೊಂದಿರುವ ಈ ಪೋರ್ಟಲ್ ಅನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ನಿರ್ವಹಿಸುತ್ತದೆ. ಇದರಲ್ಲಿ 28.6 ಕೋಟಿ ಜನರ ದತ್ತಾಂಶಗಳನ್ನು ನೋಂದಾಯಿಸಲಾಗಿದ್ದು, ಅವರಲ್ಲಿ 20.63 ಕೋಟಿ ಜನರು ಪಡಿತರ ಚೀಟಿಗಳನ್ನು ಪಡೆಯಬಹುದು ಎಂದು ʼದಿ ಹಿಂದೂʼ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು 2023 ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡಲು ಮೂರು ತಿಂಗಳ ಕಾಲಾವಕಾಶ ನೀಡಿದ ಉನ್ನತ ನ್ಯಾಯಾಲಯದ ಆದೇಶವನ್ನು ಅನುಸರಿಸಲು ವಿಫಲವಾಗಿವೆ ಎಂದು ಗಮನಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಕೋಟಾವನ್ನು ಲೆಕ್ಕಿಸದೆ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡಬೇಕು ಎಂದು ಹೋರಾಟಗಾರರಾದ ಅಂಜಲಿ ಭಾರದ್ವಾಜ್, ಹರ್ಷ ಮಂದರ್ ಮತ್ತು ಜಗದೀಪ್ ಚೋಕರ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಚೆರಿಲ್ ಡಿಸೋಜಾ, ದೇಶದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ 2011ರ ಜನಗಣತಿಯ ಆಧಾರದ ಮೇಲೆ ಆಹಾರ ಭದ್ರತಾ ಕಾನೂನಿನ ವ್ಯಾಪ್ತಿಯನ್ನು ನಿರ್ಧರಿಸಲಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರವನ್ನು ಪಡೆಯುವ ವ್ಯಕ್ತಿಗಳ ಸಂಖ್ಯೆಯು ಇತ್ತೀಚಿನ ಜನಗಣತಿಯನ್ನು ಆಧರಿಸಿರಬೇಕು, ಅದನ್ನು ಇನ್ನೂ ಕೈಗೊಳ್ಳಬೇಕಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಹಲವು ರಾಜ್ಯಗಳು ಪಡಿತರ ಚೀಟಿ ಫಲಾನುಭವಿಗಳ ಕೋಟಾವನ್ನು ಮುಗಿಸಿವೆ. ಕಾಯ್ದೆಯಡಿ ವ್ಯಾಪ್ತಿಯನ್ನು ಹೆಚ್ಚಿಸದ ಕಾರಣ ಹೊಸ ಕಾರ್ಡ್ಗಳನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಅರ್ಜಿದಾರ ಪರ ವಕೀಲರು ಹೇಳಿದರು.
ಅರ್ಜಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, 80 ಕೋಟಿ ಪಡಿತರ ಚೀಟಿದಾರರ ಕೆವೈಸಿ ಅಥವಾ ನೋ ಯುವರ್ ಕಸ್ಟಮರ್ ನ ಅಗತ್ಯತೆಗಳನ್ನು ನವೀಕರಿಸುವುದು ಮುಂತಾದ ಅಡೆತಡೆಗಳು ಆದೇಶವನ್ನು ಜಾರಿಗೊಳಿಸುವಲ್ಲಿ ಅನಗತ್ಯ ವಿಳಂಬವನ್ನು ಉಂಟುಮಾಡುತ್ತಿವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನಿಗದಿಪಡಿಸಿದ ಕೋಟಾಗಳನ್ನು ಲೆಕ್ಕಿಸದೆ ಪಡಿತರ ಚೀಟಿಗಳನ್ನು ನೀಡಬೇಕು ಎಂದು ಹೇಳಿದೆ.