ಭೀಮಾ ಕೋರೆಗಾಂವ್ ಪ್ರಕರಣ: ಪ್ರೊಫೆಸರ್ ಶೋಮಾ ಸೇನ್‍ಗೆ ಸುಪ್ರೀಂ ಜಾಮೀನು
ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಸಂಪರ್ಕದ ಆರೋಪದಲ್ಲಿ ಬಂಧಿತರಾಗಿದ್ದ ನಾಗ್ಪುರ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಶೋಮಾ ಸೇನ್ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ-1967 ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ 2018ರ ಜೂನ್ 6ರಂದು ಬಂಧಿಸಲಾಗಿತ್ತು. ಶುಕ್ರವಾರ ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ಆಗಸ್ಟಿನ್ ಜಾರ್ಜ್ ಮಶೀಹ್ ಅವರನ್ನೊಳಗೊಂಡ ಪೀಠ, ಸೇನ್ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯ ಸೆಕ್ಷನ್ 433ಡಿ(5) ಅನ್ವಯ ಜಾಮೀನು ಮಂಜೂರು ಮಾಡಲು ಇರುವ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸೇನ್ ಹಿರಿಯ ವಯಸ್ಸಿನ ಹಾಗೂ ಹಲವು ಅಸ್ವಸ್ಥತೆಗಳನ್ನು ಹೊಂದಿರುವ ಮಹಿಳೆ ಎಂದೂ ಪೀಠ ಉಲ್ಲೇಖಿಸಿದೆ. ಅವರ ಮೇಳಿನ ಆರೋಪಗಳ ಸ್ವರೂಪ ಹಾಗೂ ವಿಚಾರಣೆ ಆರಂಭಕ್ಕೆ ಆಗಿರುವ ವಿಳಂಬದಿಂದಾಗಿ ಅವರು ಸುಧೀರ್ಘ ಸೆರೆಮನೆ ವಾಸ ಅನುಭವಿಸಿದ್ದಾರೆ ಎಂಬ ಅಂಶವನ್ನೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿ ಗಮನಾರ್ಹ ಅಂಶವೆಂದರೆ ಸುಪ್ರೀಂಕೋರ್ಟ್ ಮಾರ್ಚ್ 15ರಂದು ಈ ಸಂಬಂಧ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‍ಐಎ)ಗೆ, ಸೇನ್ ಅವರ ಬಂಧನ ಮುಂದುವರಿಸುವ ಅಗತ್ಯತೆ ಏನು ಎಂದು ಪ್ರಶ್ನಿಸಿತ್ತು. ಆ ಬಳಿಕ ಎನ್‍ಐಎ, ಅವರ ಕಸ್ಟಡಿ ಅಗತ್ಯವಿಲ್ಲ ಎಂಧು ಸ್ಪಷ್ಟಪಡಿಸಿತ್ತು. ಈ ಅಂಶವನ್ನು ಕೂಡಾ ಕೋರ್ಟ್ ಪರಿಗಣಿಸಿದೆ.
ಸೇನ್ ಅವರು ವಿಶೇಷ ನ್ಯಾಯಾಲಯದ ಅನುಮತಿ ಇಲ್ಲದೇ ಮಹಾರಾಷ್ಟ್ರವನ್ನು ಬಿಡುವಂತಿಲ್ಲ ಹಾಗೂ ತಮ್ಮ ಪಾಸ್‍ಪೋರ್ಟ್ ಸಲ್ಲಿಸಬೇಕು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ತನಿಖಾಧಿಕಾರಿಗಳಿಗೆ ನೀಡಬೇಕು ಎಂದು ಷರತ್ತು ವಿಧಿಸಿದೆ. ಮೊಬೈಲ್‍ನಲ್ಲಿ ಲೊಕೇಶನ್ ಮತ್ತು ಜಿಪಿಎಸ್ ಆನ್ ನಲ್ಲಿ ಇಡುವಂತೆಯೂ ಈ ಪ್ರೀಪೈಡ್ ಮೊಬೈಲ್ ಸಾಧನವನ್ನು ತನಿಖಾಧಿಕಾರಿಯ ಮೊಬೈಲ್ ಸಾಧನದ ಜತೆ ಸಂಪರ್ಕದಲ್ಲಿ ಇಡುವ ಮೂಲಕ ಲೊಕೇಶನ್ ತಿಳಿಯಲು ಅನುಕೂಲ ಮಾಡಿಕೊಡುವಂತೆಯೂ ಸೂಚಿಸಲಾಗಿದೆ.